
ಒಂದಾನೊಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿಯಾಗಿ ಮಿಂಚಿದ್ದ, ನಟಿ ರಕ್ಷಿತಾ ಪ್ರೇಮ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2002ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಅಪ್ಪು’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು, ಬಳಿಕ ಅದೇ ವರ್ಷದಲ್ಲಿ ತೆಲುಗಿನ ‘ಈಡಿಯಟ್’ ನಲ್ಲಿ ತೆರೆ ಹಂಚಿಕೊಂಡರು.
ಕಿಚ್ಚ ಸುದೀಪ್ ಜೊತೆ ‘ದಮ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ನಟಿ ರಕ್ಷಿತಾ ಕನ್ನಡ, ತೆಲುಗು, ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2007 ರಂದು ‘ತಾಯಿಯ ಮಡಿಲು’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, ಇವರು 2022 ರಲ್ಲಿ ತೆರೆಕಂಡ ‘ಏಕ್ ಲವ್ ಯಾ’ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿಮಾ ಕಲಾವಿದರು ನಟಿ ರಕ್ಷಿತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.