
ಬಾಲಿವುಡ್ ನ ಲೆಜೆಂಡರಿ ತಾರೆ ನಟಿ ಶ್ರೀದೇವಿ ಸಾವು ಅವರ ಅಪಾರ ಅಭಿಮಾನಿಗಳಿಗೆ ಇಂದಿಗೂ ನಂಬಲಸಾಧ್ಯವಾದ ಕಹಿ ಘಟನೆಯಾಗಿದೆ. ಫೆಬ್ರವರಿ 24, 2018 ರಂದು ದುಬೈನಲ್ಲಿ ನಿಧನರಾದ ಶ್ರೀದೇವಿ ಸಾವಿನ ಬಗ್ಗೆ ಮೊದಲ ಬಾರಿಗೆ ಅವರ ಪತಿ, ನಟ ಬೋನಿ ಕಪೂರ್ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ದಿ ನ್ಯೂ ಇಂಡಿಯನ್ ನೊಂದಿಗೆ ಮಾತನಾಡಿರುವ ಅವರು, “ಇದು ಸಹಜ ಸಾವಲ್ಲ; ಅದು ಆಕಸ್ಮಿಕ ಸಾವು” ಎಂದಿದ್ದಾರೆ. ನಾನು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೆ. ಏಕೆಂದರೆ ನಾನು ಸುಮಾರು 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ವಾಸ್ತವವಾಗಿ ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾವು ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಪ್ರಕರಣದಲ್ಲಿ ಯಾವುದೇ ಸಂಚು ನಡೆದಿಲ್ಲ ಎಂದು ಅವರು ಕಂಡುಹಿಡಿದರು. ನಾನು ಸುಳ್ಳು ಪತ್ತೆ ಪರೀಕ್ಷೆಗಳು ಮತ್ತು ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಎಲ್ಲ ಪರೀಕ್ಷೆಗಳನ್ನು ಎದುರಿಸಿದ್ದೇನೆ. ತದನಂತರ ಬಂದ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಶ್ರೀದೇವಿ ತಾನು ತೆರೆಯ ಮೇಲೆ ಸುಂದರವಾಗಿ ಕಾಣಿಸಬೇಕೆಂದು ಆಗಾಗ್ಗೆ ಉಪವಾಸ ಮಾಡುತ್ತಿದ್ದಳು. ಹಸಿವಿನಿಂದ ಇರುತ್ತಿದ್ದಳು. ತನ್ನ ದೇಹವನ್ನ ಉತ್ತಮ ಆಕಾರದಲ್ಲಿಟ್ಟುಕೊಳ್ಳಲು ಬಯಸಿದ್ದಳು. ನನ್ನನ್ನು ಮದುವೆಯಾದ ಸಮಯದಿಂದ ಅವಳು ಒಂದೆರಡು ಸಂದರ್ಭಗಳಲ್ಲಿ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಳು. ಅವಳಿಗೆ ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಹೇಳುತ್ತಲೇ ಇದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.
ನಟ ನಾಗಾರ್ಜುನ ಹೇಳಿದ ಘಟನೆಯೊಂದನ್ನು ನೆನಪಿಸಿಕೊಂಡ ಬೋನಿಕಪೂರ್ “ಅವಳು ತೀರಿಕೊಂಡಾಗ ನಾಗಾರ್ಜುನ ಅವರು ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ಈ ವೇಳೆ ಅವರು ತಮ್ಮ ಒಂದು ಚಲನಚಿತ್ರದ ಶೂಟಿಂಗ್ ಸಮಯದಲ್ಲಿ ಶ್ರೀದೇವಿ ಕ್ರ್ಯಾಶ್ ಡಯಟ್‌ನಲ್ಲಿರುತ್ತಿದ್ದರು. ಹೀಗಾಗಿಯೇ ಅವರು ಬಾತ್ರೂಮ್‌ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದರು ಎಂದು ನನಗೆ ಹೇಳಿದರು” ಎಂದು ಸ್ಮರಿಸಿಕೊಂಡರು.
ಶ್ರೀದೇವಿಯವರು ಕೊನೆಯ ಚಿತ್ರ ‘ಮಾಮ್’ ನಲ್ಲಿ ನಟಿಸಿದ್ದರು. ಇದರಲ್ಲಿನ ನಟನೆಗೆ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವ ಸಿಕ್ಕಿತ್ತು.