ಬಾಲಿವುಡ್ ನಟ ಅಭಿಷೇಕ್ ಬಚ್ಛನ್, ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂಬ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಅನೇಕ ದಿನಗಳಿಂದ ಹರಿದಾಡುತ್ತಿದೆ. ಅಭಿಷೇಕ್ ಬಚ್ಛನ್ 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಯಾಗ್‌ರಾಜ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಈ ರೀತಿಯ ವದಂತಿಗಳು ಹರಿದಾಡಿದ ಬಗ್ಗೆ ಅಭಿಷೇಕ್ ಬಚ್ಛನ್ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಈ ಸುದ್ದಿ ನಿಜ ಇರಬಹುದು ಎಂದು ಅನೇಕರು ನಂಬಿದರು. ಆದರೆ ಇದೀಗ ಕೆಲವು ವರದಿಗಳು ಈ ಬಗ್ಗ ಸ್ಪಷ್ಟನೆ ನೀಡಿದ್ದು ಅಭಿಷೇಕ್ ಬಚ್ಛನ್ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿರೋದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ನಾಯಕರೊಬ್ಬರು ಈ ವಿಚಾರವಾಗಿ ಮಾಹಿತಿ ನೀಡಿದ್ದು ಈ ಸಂಬಂಧ ನಮ್ಮ ಕಡೆಯಿಂದ ಯಾವುದೇ ಶಿಫಾರಸು ಬಂದಿಲ್ಲ ಎಂದು ಹೇಳಿದ್ದಾರೆ.
ಪ್ರಯಾಗ್‌ರಾಜ್ ಕ್ಷೇತ್ರದ ಅಭ್ಯರ್ಥಿ ಕುರಿತು ಎಸ್‌ಪಿ ನಗರ ಅಧ್ಯಕ್ಷ ಸೈಯದ್ ಇಫ್ತಿಕರ್ ಹುಸೇನ್ ಮಾತನಾಡಿದ್ದು, ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಅನ್ನೋದನ್ನು ಅಖಿಲೇಶ್ ಯಾದವ್ ನಿರ್ಧರಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಅಭಿಷೇಕ್ ಬಚ್ಛನ್ ಸ್ಪರ್ಧೆ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರೂ ಇದು ಕೇವಲ ಊಹಾಪೋಹ ಎಂದು ಹೇಳಿದ್ದಾರೆ.