ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು 5 ಕೋಟಿ ವಂಚನೆ ಪ್ರಕರಣದ 3 ನೇ ಆರೋಪಿ ‘ಅಭಿನವ ಹಾಲಶ್ರೀ’ ಯನ್ನು ಬಂಧಿಸಿದ್ದಾರೆ.
ಹೇಗಿತ್ತು ಕಾರ್ಯಾಚರಣೆ..? ಸುಳಿವು ನೀಡಿದ್ದು ಯಾರು..?
ತಲೆಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮೀಜಿ ಕಡೆ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೊಲೀಸರು ಹಾಲಶ್ರೀ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲವು ಮಾಹಿತಿ ಗೊತ್ತಾಗಿದೆ. ಚಾಲಕನ ಫೋನ್ ಕರೆ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು ಬಂದ ಕರೆಗಳ ಆಧಾರದಲ್ಲಿ ಸ್ವಾಮೀಜಿಯನ್ನು ಟ್ರ್ಯಾಕ್ ಮಾಡಲಾಗಿದೆ. ಸ್ವಾಮೀಜಿ ಇದ್ದ ಲೋಕೇಶನ್ ಟ್ರ್ಯಾಕ್ ಮಾಡಿದ ಸಿಸಿಬಿ ಪೊಲೀಸರು ಚಲಿಸುತ್ತಿದ್ದ ರೈಲಿನಲ್ಲೇ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಸಿಸಿಬಿ ಮೂರು ತಂಡ ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿತ್ತು. ಆಗಾಗ ಸ್ವಾಮೀಜಿ ಸ್ಥಳ ಬದಲಾಯಿಸುತ್ತಿದ್ದರಿಂದ ಸ್ವಾಮೀಜಿ ಬಂಧನ ತಡವಾಯಿತು ಎಂದು ಹೇಳಲಾಗಿದೆ. ಒಡಿಶಾದ ಕಟಕ್, ಆ ನಂತರ ಬಿಹಾರಕ್ಕೆ ಹೋಗಿ ತಲೆ ಮರೆಸಿಕೊಳ್ಳುವ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಇನ್ನೋರ್ವನಿಗೆ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಲು ರಂಗತಾಲೀಮು ನಡೆಸಿ ಉದ್ಯಮಿಯನ್ನು ವಂಚಿಸಿದ್ದರು.