
ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ.
ಮಕ್ಕಳನ್ನು ನೋಡಿಕೊಳ್ಳುವುದು ಮಹಿಳೆಯ ಕೆಲಸ ಎಂದು ಅನೇಕರು ಅಂದುಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವುದು ಸ್ವಲ್ಪ ಜವಾಬ್ದಾರಿ ಕೆಲಸ ನಿಜ. ಆದ್ರೆ ತಂದೆಯಾದವನು ಅದನ್ನು ಮಾಡಬೇಕಾಗುತ್ತದೆ.
ಮಗುವಿನ ಪಾಲನೆಯಲ್ಲಿ ಮೊದಲ ವರ್ಷ ಅತ್ಯಂತ ಮುಖ್ಯವಾಗಿದೆ. ಈ ಸಮಯದಲ್ಲಿ ಮಗುವಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ನವಜಾತ ಶಿಶುವಿನ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಸೋಂಕು ಮತ್ತು ರೋಗಗಳ ಅಪಾಯ ಹೆಚ್ಚು.
ಅಲ್ಲದೆ ಹುಟ್ಟಿದ ಮೊದಲ ವರ್ಷದಲ್ಲಿ ಮಗು ಪೋಷಕರೊಂದಿಗೆ ಭಾವನಾತ್ಮಕ ಪ್ರೀತಿ ಬಯಸುತ್ತದೆ. ತಾಯಿ ಮಾತೃತ್ವ ರಜೆ ತೆಗೆದುಕೊಳ್ಳುವಂತೆಯೇ ತಂದೆ ಕೂಡ ಕೆಲವು ದಿನಗಳ ಕಾಲ ರಜೆ ತೆಗೆದುಕೊಳ್ಳಬೇಕು. ಇದನ್ನು ಮಾಡುವುದರಿಂದ ನಿಮ್ಮ ಮಗುವಿನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಹೊಸ ಉದ್ಯೋಗಕ್ಕೆ ಸೇರಿದಾಗ ಅಥವಾ ಮದುವೆಯಾದಾಗ ಅನೇಕ ವಿಷಯಗಳು ಬದಲಾಗುತ್ತವೆ. ಅದೇ ರೀತಿ ಮಗು ಜನಿಸಿದ ನಂತ್ರವೂ ಅನೇಕ ಬದಲಾವಣೆಯಾಗುತ್ತದೆ. ಇದಕ್ಕೆ ತಂದೆಯಾದವನು ಹೊಂದಿಕೊಳ್ಳಬೇಕು. ತಂದೆಯಾದ ನಂತರ, ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಮಲಗುವ ಸಮಯ ಬದಲಾಗಬೇಕು. ಜೋರಾಗಿ ಮಾತನಾಡಬಾರದು. ಗಾಢ ನಿದ್ರೆ ಮಾಡಬಾರದು. ಮನೆಯ ಕೆಲಸಗಳಲ್ಲಿ ಪತ್ನಿಗೆ ನೆರವಾಗಬೇಕು.
ತಂದೆಯಾಗುವುದು ಮತ್ತು ಮಗುವಿನ ಜವಾಬ್ದಾರಿಗಳನ್ನು ಪೂರೈಸುವುದು ದೊಡ್ಡ ಸವಾಲು. ಮೊದಲ ವರ್ಷ ಮಗುವಿಗೆ ಮಾತನಾಡಲು ಬರುವುದಿಲ್ಲ. ಅದು ತನ್ನ ಭಾವನೆಗಳನ್ನು ಅಳುವ ಮೂಲಕ ವ್ಯಕ್ತಪಡಿಸುತ್ತದೆ. ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ, ರಾತ್ರಿ ಪೂರ್ತಿ ಮಗು ಮಲಗಲು ಬಿಡದೆ ಹೋದ್ರೆ ನೀವು ತಾಳ್ಮೆ ಕಳೆದುಕೊಳ್ಳಬಾರದು. ಪತ್ನಿ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆಯಬೇಕು.
ನೀವು ಮೊದಲ ಬಾರಿಗೆ ತಂದೆಯಾದಾಗ ಸಣ್ಣ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮಗುವಿಗೆ ಕಾಲಕಾಲಕ್ಕೆ ಲಸಿಕೆ ನೀಡುವುದು, ಮಗುವಿನ ಆಟಿಕೆಗಳು, ಅಗತ್ಯತೆಗಳು ಮತ್ತು ಆರೈಕೆ ವಸ್ತುಗಳನ್ನು ನೋಡಿಕೊಳ್ಳುವುದು ಸೇರಿವೆ. ಹಾಗೆ ಹೆಂಡತಿ ಮಕ್ಕಳಿಗೆ ಸಮಯ ನೀಡಬೇಕು. ಸದಾ ಕೆಲಸದ ಒತ್ತಡದಲ್ಲಿರಬಾರದು. ಮನೆಗೆ ಬಂದ್ಮೇಲೆ ಕೆಲಸದ ವಿಚಾರ ಬಿಟ್ಟು ಪತ್ನಿ, ಮಕ್ಕಳ ಜೊತೆ ಸಮಯ ಕಳೆಯಬೇಕು.