ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿಯೆಂದರೆ ಪರ್ಲ್ ಕಪೂರ್. ಕೇವಲ 27 ನೇ ವಯಸ್ಸಿನಲ್ಲಿ ಬಿಲಿಯನೇರ್ ಪಟ್ಟಕ್ಕೆ ಏರಿದ್ದು ಅವರ ಸಾಧನೆ. ಇನ್ನೊಂದು ವಿಶೇಷವೆಂದರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಂಪನಿಯನನು ಕೇವಲ 3 ತಿಂಗಳುಗಳಲ್ಲಿ ಕಟ್ಟಿ ನಿಲ್ಲಿಸಿದ್ದಾರೆ ಪರ್ಲ್ ಕಪೂರ್.
ಮುಖೇಶ್ ಅಂಬಾನಿ, ಗೌತಮ್ ಅದಾನಿ ಅವರಂತಹ ಕೋಟ್ಯಾಧಿಪತಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಈ ಯುವ ಉದ್ಯಮಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವ ವೇಗದಲ್ಲೇ ಪರ್ಲ್ ಕಪೂರ್ ಅವರಂತಹ ಯುವ ಉದ್ಯಮಿಗಳು ಸ್ಟಾರ್ಟಪ್‌ಗಳನ್ನು ಯಶಸ್ಸಿನ ಇತಿಹಾಸವನ್ನೇ ರಚಿಸುತ್ತಿದ್ದಾರೆ.
ಪರ್ಲ್ ಕಪೂರ್, ಮೂರು ತಿಂಗಳಲ್ಲಿ ತಮ್ಮ ಸ್ಟಾರ್ಟ್ಅಪ್ Zyber 365 ಅನ್ನು ಯುನಿಕಾರ್ನ್ ಪಟ್ಟಿಗೆ ಸೇರುವಂತೆ ಮಾಡಿದ್ದಾರೆ. ಅವರು ಸ್ಟಾರ್ಟ್ಅಪ್ Zyber 365 ಅನ್ನು 2023ರ ಮೇನಲ್ಲಿ ಪ್ರಾರಂಭಿಸಿದರು. ಇದು Web3 ಮತ್ತು AI ಆಧಾರಿತ OS ಸ್ಟಾರ್ಟ್ ಅಪ್. ಮಾರುಕಟ್ಟೆಗೆ ಬರುತ್ತಿದ್ದಂತೆ ಈ ಕಂಪನಿ ರಿಟೇಲ್ ವಲಯದಲ್ಲಿ ಸಂಚಲನ ಮೂಡಿಸಿತು. ಪರ್ಲ್ ಅವರ ಐಡಿಯಾ ಹಿಟ್ ಆಯ್ತು, ಕೇವಲ ಮೂರೇ ತಿಂಗಳಲ್ಲಿ ಝೈಬರ್ 365 ಯುನಿಕಾರ್ನ್ ಕಂಪನಿಯಾಯಿತು. ಕಂಪನಿಯ ಮೌಲ್ಯ 1.2 ಬಿಲಿಯನ್ ಡಾಲರ್ ಅಂದರೆ ಸುಮಾರು 9840 ಕೋಟಿ ರೂಪಾಯಿ.
ಪರ್ಲ್ ಕಪೂರ್, ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಿಂದ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ಹಣಕಾಸು ಸಲಹೆಗಾರ ಮತ್ತು ವ್ಯಾಪಾರ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಭವಿಷ್ಯದಲ್ಲಿ AIಗೆ ಇರುವ ಮಹತ್ವವನ್ನು ಅರಿತು Zyber 365 ಅನ್ನು ಪ್ರಾರಂಭಿಸಿದರು..
ಕಂಪನಿಯ ಮುಖ್ಯ ಕಚೇರಿ ಲಂಡನ್‌ನಲ್ಲಿದೆ. ಅಹಮದಾಬಾದ್‌ನಲ್ಲಿ ಸಹ ಇದು ಕಾರ್ಯನಿರ್ವಹಿಸುತ್ತದೆ. ಕೇವಲ ಮೂರು ತಿಂಗಳೊಳಗೆ ಅವರ ಕಂಪನಿಯ ಮೌಲ್ಯ 1.2 ಬಿಲಿಯನ್ ಡಾಲರ್ ದಾಟಿದೆ. ಪರ್ಲ್ ಕಪೂರ್ ಅವರ ನಿವ್ವಳ ಮೌಲ್ಯವು 1.1 ಬಿಲಿಯನ್ ಡಾಲರ್‌ಗಳಿಗೆ ಅಂದರೆ 9129 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅವರ ಕಂಪನಿಯು ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಯುನಿಕಾರ್ನ್ ಎನಿಸಿಕೊಂಡಿದೆ. ಕಂಪನಿಯಲ್ಲಿ 90 ಪ್ರತಿಶತ ಷೇರುಗಳು ಪರ್ಲ್ ಕಪೂರ್ ಬಳಿಯಿವೆ.