ಅಮೆರಿಕಾದ ಅರಿಜೋನಾ ಉಪನಗರದ ಫೀನಿಕ್ಸ್ ವಿಮಾನ ನಿಲ್ದಾಣದ ಬಳಿ ಲಘು ವಿಮಾನ ಪತನಗೊಂಡು ಕಾರಿಗೆ ಅಪ್ಪಳಿಸಿದ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ಸಾವನ್ನಪ್ಪಿದ ಐದು ಜನರಲ್ಲಿ 12 ವರ್ಷದ ಬಾಲಕನೂ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಆಸನಗಳ ಹೊಂಡಾಜೆಟ್ HA-420 ವಿಮಾನವು ಮಂಗಳವಾರ ಮಧ್ಯಾಹ್ನ ಮೆಸಾದಲ್ಲಿನ ಫಾಲ್ಕನ್ ಫೀಲ್ಡ್ ವಿಮಾನ ನಿಲ್ದಾಣದಿಂದ ಉತಾಹ್‌ನ ಪ್ರೊವೊಗೆ ಹೊರಟಿತ್ತು. ನಿಯಂತ್ರಣ ಕಳೆದುಕೊಂಡ ಈ ವಿಮಾನ ನಿಲ್ದಾಣದ ಪಶ್ಚಿಮ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವ ಮೊದಲು ವಿಮಾನ ನಿಲ್ದಾಣದ ಕಬ್ಬಿಣದ ಬೇಲಿಗೆ ಅಪ್ಪಳಿಸಿತ್ತು.
ವಿಮಾನ ಟೇಕಾಫ್ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಏಕೆ ಟೇಕಾಫ್ ಆಗಲಿಲ್ಲ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ಮೆಸಾ ಅಧಿಕಾರಿಗಳ ಸಹಾಯದಿಂದ ತನಿಖೆಯನ್ನು ಮುನ್ನಡೆಸುತ್ತಿದೆ.
ಜೆಟ್‌ನಲ್ಲಿದ್ದ ಐವರು ಪ್ರಯಾಣಿಕರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೆಸಾ ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೈಲಟ್ ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಮಾನದಲ್ಲಿದ್ದವರಲ್ಲಿ 12 ವರ್ಷದ ಗ್ರಹಾಂ ಕಿಂಬಾಲ್ ಮತ್ತು ಅವರ 44 ವರ್ಷದ ತಂದೆ ಡ್ರೂ ಕಿಂಬಾಲ್ ಸೇರಿದ್ದಾರೆ. ಇತರ ಇಬ್ಬರು ಬಲಿಪಶುಗಳು ರಸ್ಟಿನ್ ರಾಂಡಾಲ್ ಮತ್ತು ಸ್ಪೆನ್ಸರ್ ಲಿಂಡಾಲ್ ಇವರಿಬ್ಬರೂ ಮೆಸಾ ಮೂಲದ ಕಂಪನಿಯಾದ ಐಸ್ ಮ್ಯಾನ್ ಹೋಲ್ಡಿಂಗ್ಸ್ ಎಲ್ಎಲ್‌ಸಿಯ ವ್ಯವಸ್ಥಾಪಕರಾದ್ದಾರೆ.
ವಾಹನದ ಚಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಧಿಕಾರಿಗಳು ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.