
ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ನಡೆದ ನಾಟಕೀಯ ಘಟನೆಯೊಂದರಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಜನನಿಬಿಡ ರಸ್ತೆಯಲ್ಲಿನ ಸೇತುವೆ ಮೇಲೆ ಹತ್ತಿ ನಿಂತಿದ್ದು, ಆತನ ಮನವೊಲಿಸಲು ಪರಿಪರಿಯಾಗಿ ಯತ್ನಿಸಿದ ಪೊಲೀಸರು, ಅಂತಿಮವಾಗಿ ಟಾಪ್ ರೆಸ್ಟೋರೆಂಟ್ ನಿಂದ ಬಿರಿಯಾನಿ ಜೊತೆಗೆ ಉತ್ತಮ ಕೆಲಸವೊಂದನ್ನು ಕೊಡಿಸುವ ಆಮಿಷವೊಡ್ಡಿ ಸುರಕ್ಷಿತವಾಗಿ ಕೆಳಗಿಳಿಸಿಕೊಂಡಿದ್ದಾರೆ.
ಘಟನೆಯ ವಿವರ: ಕಾಲಿಯಾ ಪ್ರದೇಶದ ಟೈಲ್ಸ್ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೇತುವೆ ಮೇಲೆ ಏರಿದವನಾಗಿದ್ದು, ಈತ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಎನ್ನಲಾಗಿದೆ. ಅಲ್ಲದೆ ಪತ್ನಿ ಜೊತೆಗೂ ಸಹ ವೈಮನಸ್ಸು ಹೊಂದಿದ್ದು, ಆಕೆ ತನ್ನ ಕಿರಿಯ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ವಿಚ್ಛೇದನ ಕೋರಿ ಇವರಿಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ವಿಚಾರಣೆ ಸಹ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ತನ್ನ ಹಿರಿಯ ಮಗಳೊಂದಿಗೆ ವಾಸಿಸುತ್ತಿದ್ದ ಈ ವ್ಯಕ್ತಿ, ಈ ಎಲ್ಲಾ ವಿದ್ಯಮಾನಗಳಿಂದ ಕಂಗೆಟ್ಟಿದ್ದು, ಸೋಮವಾರ ಮಗಳ ಜೊತೆ ದ್ವಿಚಕ್ರ ವಾಹನದಲ್ಲಿ ಬರುವಾಗ ಮಧ್ಯಾಹ್ನ 2:40ರ ಸುಮಾರಿಗೆ ತನ್ನ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ ಎಂದು ನಿಲ್ಲಿಸಿದ್ದಾನೆ. ಬಳಿಕ ಸರಸರನೆ ಅಲ್ಲಿದ್ದ ಕಬ್ಬಿಣದ ಸೇತುವೆ ಮೇಲೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲಿಂದ ಆತ ಹಾರಿದ್ದರೆ ವಿದ್ಯುತ್ ತಂತಿಗಳ ಮೇಲೆ ಅಥವಾ ರೈಲು ಹಳಿಯ ಮೇಲೆ ಬೀಳುವ ಸಾಧ್ಯತೆಯಿದ್ದು, ಪ್ರಾಣಾಪಾಯ ಕೂಡ ಆಗಬಹುದಾಗಿತ್ತು.
ಅಷ್ಟರಲ್ಲೇ ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಈ ಎಲ್ಲಾ ನಾಟಕೀಯ ಬೆಳವಣಿಗೆ ಕಾರಣಕ್ಕೆ ಘಟನಾ ಸ್ಥಳದಲ್ಲಿ 20 ನಿಮಿಷಗಳ ಕಾಲ ಟ್ರಾಫಿಕ್ ಕೂಡ ಬಂದ್ ಆಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಇದ್ಯಾವ ಮಾತು ಕೇಳುವ ಸ್ಥಿತಿಯಲ್ಲಿರದ ಆತನಿಗೆ ಅಂತಿಮವಾಗಿ ಟಾಪ್ ರೆಸ್ಟೋರೆಂಟ್ ನಿಂದ ಬಿರಿಯಾನಿ ತರಿಸಿಕೊಡುವುದಾಗಿ ಹೇಳಿದ್ದಾರೆ. ಅಲ್ಲದೆ ಜೀವನೋಪಾಯಕ್ಕೆ ಉತ್ತಮ ಉದ್ಯೋಗ ಕೊಡಿಸುವುದಾಗಿ ಹೇಳಿದ್ದು, ಆತ ಕೆಳಗಿಳಿದು ಬಂದ ಬಳಿಕ ಪ್ರಕರಣ ಸುಖಾಂತ್ಯವಾಗಿದೆ.