ಬೆಂಗಳೂರು: 40% ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಬಿಜೆಪಿ ಹಾಗೂ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 6000 ಪುಟಗಳ ದಾಖಲೆಯನ್ನು ಸಲ್ಲಿಸಿದ್ದಾರೆ.
ನಿವೃತ್ತ ನ್ಯಾ.ಹೆಚ್.ಎಸ್.ನಾಗಮೋಹನ್ ದಾಸ್ ಸಮಿತಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆಪತ್ರ, ಆಡಿಯೋ, ವಿಡಿಯೋಗಳನ್ನು ಸಲ್ಲಿಸಿದರು.
ಹಿಂದಿನ ಸರ್ಕಾರದಲ್ಲಿ ನೀರಾವರಿ, ಕೃಷಿ, ಜಲಸಂಪನ್ಮೂಲ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ದಾಖಲೆ ಸಲ್ಲಿಸಲಾಗಿದೆ.
ಹಿರಿತನ ಆಧಾರದಲ್ಲಿ ಬಾಕಿ ಬಿಲ್ ಪಾವತಿ, ಕಮಿಷನ್ ನೀಡಿದವರಿಗೆ ಮಾತ್ರ ಬಾಕಿ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಸೇರಿದಂತೆ ಹಲವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದರು.
ಇದೀಗ ಕಮಿಷನ್ ಹಾಗೂ ಭ್ರಷ್ಟಾಚಾರ ವಿಚಾರವಾಗಿ ಬಿಜೆಪಿ ಹಾಗೂ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಪಣ್ಣ ದಾಖಲೆಪತ್ರಗಳನ್ನು ಸಮಿತಿಗೆ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.