ಬೆಂಗಳೂರು : ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.
ಶಂಕಿತ ಉಗ್ರ ಜಾಹಿದ್ ತಬ್ರೇಜ್ ನಿವಾಸದಲ್ಲಿ 4 ಗ್ರೆನೇಡ್ಗಳು ಪತ್ತೆಯಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ನಿವಾಸದಲ್ಲಿ ಕೆಮಿಕಲ್ ಹಾಗೂ ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್ ಪತ್ತೆಯಾಗಿದೆ. ಬಂಧಿತ 5 ನೇ ಆರೋಪಿ ಜಾಹಿದ್ ತಬ್ರೇಜ್ ಮನೆಯ ಬೀರುವಿನಲ್ಲಿ ಗ್ರೆನೇಡ್ ಪತ್ತೆಯಾಗಿದೆ. ಸದ್ಯ ಅದನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದಾರೆ. 5 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಅವರಿಂದ ಹೇಳಿಕೆಗಳನ್ನ ಪಡೆಯಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಎನ್ ಐ ಎ ವಿಶೇಷ ಕೋರ್ಟ್ ಐವರು ಶಂಕಿತ ಉಗ್ರರನ್ನು ಏಳು ದಿನಗಳ ಕಾಲ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. 15 ದಿನ ತಮ್ಮ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಮಾಡಿಕೊಂಡಿತ್ತು, ಆದರೆ ಕೋರ್ಟ್ 7 ದಿನ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಗಳೂರಿನ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಶಂಕಿತ ಉಗ್ರರ ಪೈಕಿ ಐವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ನಂಬರ್-1 ನಜೀರ್ ಹಾಗೂ ಆರೋಪಿ ನಂಬರ್ 2 ಸದ್ಯ ಪರಾರಿಯಾಗಿದ್ದು, 3 ಸುಹೇಲ್, 4 ಉಮರ್, 5, ಜಾಹೀದ್, 6 ಮುದಾಸಿರ್, ಫೈಜಲ್ ಆರೆಸ್ಟ್ ಆಗಿದ್ದಾರೆ.