ಮಾಜಿ ಐಪಿಎಲ್ ಅಧ್ಯಕ್ಷ ಹಾಗೂ ಉದ್ಯಮಿ ಲಲಿತ್ ಮೋದಿ ಕೊರೊನಾ ಸೋಂಕಿನಿಂದ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಪುತ್ರ ರುಚಿರ್ ಮೋದಿ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸುವುದಾಗಿ ಲಲಿತ್ ಮೋದಿ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಪುತ್ರಿ ಆಲಿಯಾ ಜೊತೆ ಚರ್ಚಿಸಿದ್ದು, ಮಗ ರುಚಿರ್ ಮೋದಿಯನ್ನು ಉತ್ತರಾಧಿಕಾರಿಯೆಂದು ಘೋಷಿಸಿದ್ದಾರೆ. ಕೌಟುಂಬಿಕ ವ್ಯವಹಾರಗಳು ಮತ್ತು ಲಾಭದಾಯಕ ಹಿತಾಸಕ್ತಿಗಳ ನಿಯಂತ್ರಣವನ್ನು ಮಗ ರುಚಿರ್‌ಗೆ ವಹಿಸಿದ್ದಾರೆ.
ಕುಟುಂಬದ ಆಸ್ತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಅವರ ತಾಯಿ ಮತ್ತು ಸಹೋದರಿಯ ಮಧ್ಯೆ ಕಲಹ ಏರ್ಪಟ್ಟಿದೆ. ಈ ಕಾನೂನು ವಿವಾದವು ಸುದೀರ್ಘ, ಬೇಸರದ ಸಂಗತಿ ಜೊತೆಗೆ ಕಷ್ಟಕರ ಎಂದು ಲಲಿತ್ ಮೋದಿ ವಿವರಿಸಿದ್ದಾರೆ. ಇದನ್ನು ಇತ್ಯರ್ಥಗೊಳಿಸಲು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರೂ ಒಮ್ಮತಕ್ಕೆ ಬರದೇ ಇರುವುದರಿಂದ ನೋವಾಗಿದೆ ಅಂತಾ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಲಿತ್ ಮೋದಿ ತಮ್ಮ ಮಗನಿಗೆ 4555 ಕೋಟಿ ಮೌಲ್ಯದ ಆಸ್ತಿಯನ್ನು ಹಸ್ತಾಂತರಿಸಿದ್ದಾರೆ. ರುಚಿರ್ ತಾಯಿ ಮೃಣಾಲ್ ಮೋದಿ 2018 ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.
ಸದ್ಯ ರುಚಿರ್ ಮೋದಿ ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಮೋದಿ ವೆಂಚರ್ಸ್‌ನ ಸಿಇಓ ಮತ್ತು ಸಂಸ್ಥಾಪಕರೂ ಆಗಿದ್ದಾರೆ. 28 ವರ್ಷದ ರುಚಿರ್ ಯುನೈಟೆಡ್ ಕಿಂಗ್‌ಡಮ್‌ನಲ್ಲೇ ಪದವಿ ಪಡೆದಿದ್ದಾರೆ. ತಂದೆ ಲಲಿತ್ ಮೋದಿಯಂತೆ ರುಚಿರ್ ಕೂಡ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು 2016 ರಿಂದ 2020 ರವರೆಗೆ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್‌ನ ಅಲ್ವಾರ್ ಒಕ್ಕೂಟದ ಅಧ್ಯಕ್ಷರಾಗಿದ್ದರು. ರುಚಿರ್ ಮೋದಿ ಅದ್ದೂರಿ ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ ವಲಯದಲ್ಲೂ ಸಕ್ರಿಯರಾಗಿದ್ದಾರೆ. 2017ರಲ್ಲಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಿದ್ದ ರುಚಿರ್ ಸೋಲು ಅನುಭವಿಸಿದ್ದರು.