alex Certify ಸೈಬರ್ ವಂಚಕನಾಗಿ ಬದಲಾದ ತರಕಾರಿ ವ್ಯಾಪಾರಿ: ಆರು ತಿಂಗಳಲ್ಲಿ ವಂಚಿಸಿದ್ದು ಬರೋಬ್ಬರಿ 21 ಕೋಟಿ ರೂ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಬರ್ ವಂಚಕನಾಗಿ ಬದಲಾದ ತರಕಾರಿ ವ್ಯಾಪಾರಿ: ಆರು ತಿಂಗಳಲ್ಲಿ ವಂಚಿಸಿದ್ದು ಬರೋಬ್ಬರಿ 21 ಕೋಟಿ ರೂ…..!

ಫರಿದಾಬಾದ್: ಇದು ತರಕಾರಿ ವ್ಯಾಪಾರಿಯೊಬ್ಬ ಸೈಬರ್ ವಂಚಕನಾಗಿ ಬೆಳೆದ ಕಥೆ. ಕೇವಲ ಆರು ತಿಂಗಳಲ್ಲಿ ಹಲವಾರು ಜನರಿಗೆ ವಂಚಿಸಿ 21 ಕೋಟಿ ರೂ. ಬಾಚಿದ್ದಾನೆ.

ಹರಿಯಾಣದ ಫರಿದಾಬಾದ್ ನಲ್ಲಿ ರಿಷಭ್ ಎಂಬಾತ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ಬಂದ ಹಣದಲ್ಲೇ ಕುಟುಂಬವನ್ನು ಪೋಷಿಸುತ್ತಾ ನೆಮ್ಮದಿಯಾಗಿ ಕಾಲಕಳೆಯುತ್ತಿದ್ದ. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಅಪ್ಪಳಿಸಿದಾಗ ಬಹಳ ನಷ್ಟಕ್ಕೆ ಸಿಲುಕಿದ. ಕುಟುಂಬವನ್ನು ಸಾಕುವುದು ಹೇಗೆ ಎಂಬ ಯೋಚನೆಯಲ್ಲಿದ್ದ ಆತನಿಗೆ ಹೊಳೆದದ್ದೇ ಅಡ್ಡದಾರಿ.

ಹೌದು, ತರಕಾರಿ ವ್ಯಾಪಾರಿಯಾಗಿದ್ದ 27 ವರ್ಷದ ರಿಷಭ್ ಸೈಬರ್ ವಂಚಕನಾಗಿ ಬದಲಾದ. ಕೇವಲ ಆರು ತಿಂಗಳಲ್ಲಿ, ಹಲವಾರು ಜನರನ್ನು ಮೋಸಗೊಳಿಸಿ 21 ಕೋಟಿ ರೂ. ವಂಚಿಸಿದ್ದಾನೆ. ದೇಶದ 10 ರಾಜ್ಯಗಳಲ್ಲಿ 37 ವಂಚನೆ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. 855 ಹಗರಣಗಳಲ್ಲಿ ಬೇರೆಯವರಿಗೆ ವಂಚನೆಗೆ ಸಹಾಯ ಮಾಡಿದ್ದಾನೆ.

ವಂಚಕ ರಿಷಭ್ ನನ್ನು ಅಕ್ಟೋಬರ್ 28 ರಂದು ಪೊಲೀಸರು ಬಂಧಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಈತ ಚೀನಾ ಮತ್ತು ಸಿಂಗಾಪುರ ಸೇರಿದಂತೆ ಇತರೆ ದೇಶಗಳ ವಂಚಕರ ಗುಂಪುಗಳೊಂದಿಗೆ ರಹಸ್ಯ ವಿಧಾನಗಳನ್ನು ಬಳಸಿಕೊಂಡು ಹಣವನ್ನು ಕಳುಹಿಸಲು ಕೆಲಸ ಮಾಡುತ್ತಿದ್ದಿರಬಹುದು ಎಂದು ಹೇಳಲಾಗಿದೆ.

ಕೆಲವು ವರ್ಷಗಳ ಹಿಂದೆ, ರಿಷಬ್ ಫರಿದಾಬಾದ್‌ನಲ್ಲಿ ತರಕಾರಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಆದರೆ, ಸಾಂಕ್ರಾಮಿಕ ರೋಗ ಅಪ್ಪಳಿಸಿದಾಗ, ಅವನು ತನ್ನ ವ್ಯವಹಾರವನ್ನು ಮುಚ್ಚಬೇಕಾಯಿತು. ಹೀಗಾಗಿ ತನ್ನ ಕುಟುಂಬವನ್ನು ಪೋಷಿಸಲು ಮನೆಯಿಂದ ಕೆಲಸ ಮಾಡಲು ಪ್ರಯತ್ನಿಸಿದ. ಆಗಲೇ ಆನ್ ಲೈನ್ ವಂಚನೆಯಲ್ಲಿ ತೊಡಗಿದ್ದ ಹಳೆಯ ಗೆಳೆಯನ ಜೊತೆ ಮತ್ತೆ ಸಂಪರ್ಕ ಸಾಧಿಸಿದ.

ರಿಷಭ್ ಸ್ನೇಹಿತ ಅವನಿಗೆ ಫೋನ್ ಸಂಖ್ಯೆಗಳ ಪಟ್ಟಿಯನ್ನು ಕೊಟ್ಟ. ಈ ಮೂಲಕ ಆತ ಜನರಿಗೆ ಕರೆ ಮಾಡಿ ನಕಲಿ ಉದ್ಯೋಗಾವಕಾಶಗಳನ್ನು ನೀಡಲು ಶುರು ಮಾಡಿದ. ಈ ಮೂಲಕ ಹಲವಾರು ಮಂದಿಗೆ ವಂಚಿಸಿದ್ದಾನೆ. 20 ಲಕ್ಷ ಕಳೆದುಕೊಂಡ ಡೆಹ್ರಾಡೂನ್‌ನ ಉದ್ಯಮಿಯೊಬ್ಬರು ಈ ವಂಚಕನ ಜಾಡಿನ ಕೊನೆಯ ಬಲಿಪಶು. ಸದ್ಯ, ವಂಚಕ ರಿಷಭ್ ಪೊಲೀಸರ ಅತಿಥಿಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...