ಕಾಸರಗೋಡು: ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿದೆ. ಕೇರಳದ ಕಾಸರಗೋಡಿನ ಪೆರುಂಬೋಳದಲ್ಲಿ ಘಟನೆ ನಡೆದಿದೆ.
ಅಂಜುಶ್ರೀ ಪಾರ್ವತಿ(20) ಮೃತಪಟ್ಟ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ಬಿರಿಯಾನಿ ಸೇವಿಸಿದ ಬಳಿಕ ಅಂಜುಶ್ರೀ ಪಾರ್ವತಿ ಅಸ್ವಸ್ಥಗೊಂಡಿದ್ದರು. ಆನ್ಲೈನ್ ನಲ್ಲಿ ಕಾಸರಗೋಡಿನ ಹೋಟೆಲ್ ಒಂದರಿಂದ ಅವರು ಬಿರಿಯಾನಿ ತರಿಸಿಕೊಂಡಿದ್ದರು.
ಕಾಸರಗೋಡಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ. ಕೇರಳದ ಆಹಾರ ಸುರಕ್ಷತಾ ಆಯುಕ್ತರಿಗೆ ಈ ಕುರಿತಾಗಿ ವರದಿ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಬಾಲಕಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವೀಣಾ ಜಾರ್ಜ್ ಪತ್ತನಂತಿಟ್ಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.