ಅಂಕಾರಾ: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ರಬ್ಬರ್ ದೋಣಿಯೊಂದು ಟರ್ಕಿಯ ವಾಯುವ್ಯ ಪ್ರಾಂತ್ಯದ ಕ್ಯಾನಕ್ಕಲೆಯಲ್ಲಿ ಮುಳುಗಿ ಶಿಶುಗಳು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅನಾಡೋಲು ಸುದ್ದಿ ಸಂಸ್ಥೆ ಶುಕ್ರವಾರ ತಿಳಿಸಿದೆ.
ಶುಕ್ರವಾರ ಮುಂಜಾನೆ ನಾಲ್ವರು ವಲಸಿಗರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಕ್ಯಾನಕ್ಕಲೆ ಗವರ್ನರ್ ಇಲ್ಹಾಮಿ ಅಕ್ತಾಸ್ ತಿಳಿಸಿದ್ದಾರೆ.
ಅಧಿಕಾರಿಗಳು ಹತ್ತು ಕೋಸ್ಟ್ ಗಾರ್ಡ್ ಬೋಟ್ ಗಳು, ಎರಡು ಹೆಲಿಕಾಪ್ಟರ್ ಗಳು, ಸಾಗರ ಪೊಲೀಸ್, ಟರ್ಕಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಫ್‌ಎಡಿ) ಮತ್ತು ರಾಷ್ಟ್ರೀಯ ವೈದ್ಯಕೀಯ ರಕ್ಷಣಾ ತಂಡ(ಯುಎಂಕೆಇ) ಒಳಗೊಂಡ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಶಿಶುಗಳು ಮತ್ತು ಮಕ್ಕಳು ಕೂಡ ಇದ್ದಾರೆ ಎಂದು ಅಕ್ತಾಸ್ ಹೇಳಿದರು.
ದೋಣಿ ಮುಳುಗಿದಾಗ ಅದರಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ ಮತ್ತು ಕರಾವಳಿ ಕಾವಲು ಪಡೆ ಈ ಪ್ರದೇಶದಲ್ಲಿ ಶೋಧ ಮುಂದುವರೆಸಿದೆ. ಟರ್ಕಿಯ ಕರಾವಳಿ ಕಾವಲು ಸಿಬ್ಬಂದಿ ಇಬ್ಬರು ವಲಸಿಗರನ್ನು ಕ್ಯಾನಕ್ಕಲೆ ಪ್ರಾಂತ್ಯದ ಎಸಿಬಾಟ್ ಪಟ್ಟಣದ ಸಮುದ್ರದಿಂದ ರಕ್ಷಿಸಿದರೆ, ಇನ್ನಿಬ್ಬರು ತಾವಾಗಿಯೇ ದಡ ತಲುಪಿದ್ದಾರೆ.