11 ವರ್ಷದ ಬಾಲಕನೊಬ್ಬ ಸಹಾಯಕ್ಕಾಗಿ 911 ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿದ ನಂತರ ಆತನ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿರುವ ಘಟನೆ ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ ನಡೆದಿದೆ. ಗಾಯಗೊಂಡ ಬಾಲಕ ಆಸ್ಪತ್ರೆಯಿಂದ ಗುಣಮುಖನಾಗಿ ಬಿಡುಗಡೆಯಾಗಿದ್ದಾನೆ.
ಬಾಲಕನನ್ನು ಅಡೆರಿಯನ್ ಮರ್ರಿ ಎಂದು ಗುರುತಿಸಲಾಗಿದ್ದು, ಆತನ ಕುಟುಂಬವು ಅಧಿಕಾರಿಯನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿದೆ. ಸಹಾಯಕ್ಕಾಗಿ 911 ಗೆ ಕರೆ ಮಾಡಿದ ನಂತರ ಪೊಲೀಸ್ ಅಧಿಕಾರಿಯಿಂದ ಗುಂಡು ಹಾರಿಸಲ್ಪಟ್ಟ 11 ವರ್ಷದ ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಅವನ ಕುಟುಂಬ ತಿಳಿಸಿದೆ.
ಮನೆಯಲ್ಲಿದ್ದವರನ್ನು ಹೊರಗೆ ಬರುವಂತೆ ಅಧಿಕಾರಿ ಹೇಳಿದ ನಂತರ ಒಂದರಿಂದ ಎರಡು ನಿಮಿಷ ಗುಂಡಿನ ದಾಳಿ ನಡೆದಿದೆ ಎಂದು ಬಾಲಕನ ತಾಯಿ ಮರ್ರಿ ಹೇಳಿದ್ದಾರೆ. ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡ ಬಾಲಕನನ್ನು ಜಾಕ್ಸನ್‌ನಲ್ಲಿರುವ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಬಾಲಕನನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಗುಂಡಿನ ದಾಳಿ ವೇಳೆ ಮರ್ರಿಯ ಮಗಳು ಮತ್ತು 2 ವರ್ಷದ ಸೋದರಳಿಯ ಸೇರಿದಂತೆ ಇತರ ಇಬ್ಬರು ಮಕ್ಕಳು ಮನೆಯಲ್ಲಿದ್ದರು ಎಂದು ಅವರು ಹೇಳಿದರು. ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿ ಗ್ರೆಗ್ ಕೇಪರ್ಸ್ ಎಂದು ಇಂಡಿಯಾನೋಲಾ ಪೊಲೀಸ್ ಇಲಾಖೆ ತಿಳಿಸಿದೆ.