ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು 2000 ಕೋಟಿರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಅವರು ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಭಾರತೀಯ ಚುನಾವಣಾ ಆಯೋಗವು ನಿಜವಾದ ಶಿವಸೇನೆ ಎಂದು ಗುರುತಿಸಿದ ರೀತಿ ನ್ಯಾಯವಲ್ಲ. ಆದರೆ ಅದು “ವ್ಯವಹಾರ”. ಇದುವರೆಗೆ ಆ ಪ್ರಕರಣದಲ್ಲಿ 2,000 ಕೋಟಿ ವ್ಯವಹಾರ ನಡೆದಿದೆ. ಇದು ನನ್ನ ಪ್ರಾಥಮಿಕ ಊಹೆ ಎಂದು ರಾಜ್ಯಸಭೆಯ ಸದಸ್ಯ ಸಂಜಯ್ ರಾವುತ್ ಪ್ರತಿಪಾದಿಸಿದರು.
ಶಾಸಕರೊಬ್ಬರನ್ನು 50 ಕೋಟಿ ರೂ.ಗೆ ಖರೀದಿಸಲು, 100 ಕೋಟಿ ರೂ. ಬಿಡ್ ಮಾಡಿ ಸಂಸದರೊಬ್ಬರನ್ನು ಕೊಳ್ಳಲು, 1 ಕೋಟಿ ರೂ. ಬಿಡ್ ಮಾಡಿ ನಮ್ಮ ಕೌನ್ಸಿಲರ್ ಮತ್ತು ಶಾಖಾ ಪ್ರಮುಖರನ್ನು ಖರೀದಿಸಲು ಮುಂದಾಗಿರುವ ಸರ್ಕಾರ, ನಾಯಕ ಮತ್ತು ನಿರ್ಲಜ್ಜರ ಗುಂಪು, ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು ಅವರು ಎಷ್ಟು ಬಿಡ್ ಮಾಡಬಹುದು ಎಂದು ಊಹಿಸಬಹುದು. ನನ್ನ ಜ್ಞಾನದ ಪ್ರಕಾರ ಇದು 2,000 ಕೋಟಿ ರೂ. ಡೀಲ್ ಎಂದು ಹೇಳಿದ್ದಾರೆ.