ಹೋಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯಿದೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ನೌಕರರ ಬಾಕಿ ಇರುವ ಬೇಡಿಕೆಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಮಾರ್ಚ್ 1 ರಂದು ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ನಿರ್ಧಾರವನ್ನು ಅನುಮೋದಿಸಬಹುದು ಎನ್ನಲಾಗ್ತಿದೆ. ಅನುಮೋದನೆ ಸಿಕ್ಕಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಅಥವಾ ಅದಕ್ಕೂ ಮೊದಲೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಕೇಂದ್ರ ನಿರ್ಧಾರವನ್ನು ಪ್ರಕಟಿಸಬಹುದು.
ಯಾಕಂದ್ರೆ ದೀರ್ಘಾವಧಿಯಿಂದಲೂ ನೌಕರರು ಡಿಎ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಡಿಆರ್ ಅನ್ನು ಎರಡು ಬಾರಿ ಹೆಚ್ಚಿಸುತ್ತದೆ. ಮೊದಲು ಜನವರಿಯಲ್ಲಿ ಮತ್ತು ನಂತರ ಜುಲೈನಲ್ಲಿ. ಕೇಂದ್ರ ಸರ್ಕಾರವು ಕಳೆದ ವರ್ಷ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿ ನಂತರ ಸೆಪ್ಟೆಂಬರ್‌ನಲ್ಲೂ ಏರಿಕೆ ಮಾಡಿತ್ತು. ಈ ಬಾರಿ ಕೂಡ ಅದೇ ಟ್ರೆಂಡ್‌ನಲ್ಲಿ ಮಾರ್ಚ್‌ನಲ್ಲೇ ಡಿಎ ಹೆಚ್ಚಿಸಬಹುದು. ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ಡಿಎಯನ್ನು ಶೇ.4 ರಷ್ಟು ಹೆಚ್ಚಿಸಿತ್ತು.
ಈ ಬಾರಿಯೂ ನೌಕರರು 4 ಪ್ರತಿಶತದಷ್ಟು ಡಿಎ ಹೆಚ್ಚಳವನ್ನು ಪಡೆಯಬಹುದು. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. 4 ಪ್ರತಿಶತ ಡಿಎ ಹೆಚ್ಚಳವಾದಲ್ಲಿ ಪ್ರಸ್ತುತ ಶೇ.38 ರಷ್ಟಿರುವ ಭತ್ಯೆ 42 ಪ್ರತಿಶತದಷ್ಟಾಗುತ್ತದೆ. ಕೇಂದ್ರ ಸರ್ಕಾರ ಹೊಸ ಆಯೋಗವನ್ನೇ ಜಾರಿಗೆ ತರಬಹುದು ಎಂಬ ವದಂತಿಯೂ ಇದೆ. ಆದರೆ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ 8 ನೇ ವೇತನ ಆಯೋಗದ ಪ್ರಸ್ತಾಪವಿಲ್ಲ.