ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚು.
ಹಲ್ಲಿನ ಒಳಭಾಗ ಮತ್ತು ಹೊರ ಭಾಗ ವಿಭಿನ್ನವಾಗಿ ರೂಪಗೊಂಡಿರುತ್ತದೆ. ಹಲ್ಲಿನ ಹೊರಪದರವನ್ನುಎನಾಮಲ್ ಎನ್ನುತ್ತಾರೆ. ಇದು ಅತ್ಯಂತ ಕಠಿಣವಾದ ಭಾಗ. ಒಳಪದರವು ಗಡುಸಾದ ಡಂಟೈನ್ ಅಥವಾ ದಂತದ್ರವ್ಯವನ್ನು ಒಳಗೊಂಡಿದೆ.
ಹಲ್ಲುನೋವು ಬರಲು ಮುಖ್ಯ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು. ಏನನ್ನಾದರೂ ತಿಂದಾಗ ನಾವು ತಿಂದ ಆಹಾರದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಉಪಯೋಗಿಸಿಕೊಂಡು ಬ್ಯಾಕ್ಟೀರಿಯಾಗಳು ಆಸಿಡ್ ಉತ್ಪತ್ತಿ ಮಾಡುತ್ತವೆ. ಆ ಆಸಿಡ್ ಹಲ್ಲಿನ ಎನಾಮಲ್ ಅನ್ನು ಕರಗಿಸುತ್ತದೆ. ಒಂದು ವೇಳೆ ನಾವು ಆಹಾರ ತಿಂದು ಬಾಯನ್ನು ತೊಳೆಯದೆ ಇದ್ದರೆ ಬಾಯಲ್ಲಿ ಉಳಿದಂತಹ ಆಹಾರದ ಕಣಗಳಿಂದ ಬ್ಯಾಕ್ಟೀರಿಯಾದ ಕೆಲಸ ಸುಲಭವಾಗುತ್ತದೆ.
ಹಲ್ಲಿನ ಎನಾಮಲ್ ನಾಶವಾದರೆ ಹಲ್ಲು ಹುಳುಕಾಗುತ್ತವೆ ಅಲ್ಲಿ ವಿಪರೀತ ನೋವು ಪ್ರಾರಂಭವಾಗುತ್ತದೆ. ಅದೇ ಜಾಗದಲ್ಲಿ ರಕ್ತನಾಳಗಳು ಮತ್ತು ನರಗಳು ಕೊನೆಗೊಂಡಿರುವುದರಿಂದ ನೋವು ಹೆಚ್ಚಾಗುತ್ತದೆ.
ಆಹಾರ ತಿಂದ ತಕ್ಷಣ ಬಾಯಿ ತೊಳೆಯುವುದೊಂದೇ ಈ ಸಮಸ್ಯೆಗೆ ಪರಿಹಾರ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವಾಗ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡರೆ ಹಲ್ಲು ದೀರ್ಘ ಕಾಲ ಬಾಳಿಕೆ ಬರುತ್ತದೆ