ರಾಜ್ಯದ ಅತಿ ದೊಡ್ಡ ಆನೆ ಶಿಬಿರ ಎಂಬ ಹೆಸರಿರುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೆ. ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ ನಡೆಯುತ್ತದೆ ಹಾಗೂ ಪ್ರವಾಸಿಗರಿಗೆ ಆನೆ ಸವಾರಿಯ ಅವಕಾಶವೂ ಇದೆ.
ಪ್ರತಿ ದಿನ ಬೆಳಿಗ್ಗೆ 8 ರಿಂದ 11 ರವರೆಗೆ ಪ್ರವಾಸಿಗರಿಗೆ ಇದು ತೆರೆದಿರುತ್ತದೆ. ಈ ಸಮಯದ ಬಳಿಕ ಆನೆಗಳನ್ನು ಕಾಡಿನಲ್ಲಿ ಬಿಡಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲೇ ಅಲೆದಾಡುವ ಆನೆಗಳನ್ನು ಮುಂಜಾನೆ ವೇಳೆ ಶಿಬಿರಕ್ಕೆ ಮರಳಿ ತರಲಾಗುತ್ತದೆ.
ಸಕ್ಕರೆ ಬೈಲಿನಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಆಡುವುದನ್ನು, ವೀಕ್ಷಿಸುವುದೇ ಒಂದು ಆನಂದ. ಸ್ವಚ್ಛಂದವಾಗಿ ವಿಹರಿಸುವ ಆನೆಗಳು ಮಕ್ಕಳಂತೆ ನೀರು ಕೆಸರು ಎರಚಾಟ ನಡೆಸುವುದನ್ನು ನೋಡಲೆಂದೇ ಪ್ರವಾಸಿಗರು ಆಗಮಿಸುತ್ತಾರೆ.
ಮಾನವನ ಒಡನಾಟಕ್ಕೆ ಒಗ್ಗಿಕೊಂಡಿರುವ ಆನೆಗಳು ಪ್ರವಾಸಿಗರ ಸೆಲ್ಫಿಗೂ ಫೋಸ್ ನೀಡಿ ಮೆಚ್ಚುಗೆ ಪಡೆಯುತ್ತವೆ. ಇದು ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿದೆ.