ಎಳನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇದೊಂದು ನೈಸರ್ಗಿಕ ಪಾನೀಯವಾಗಿದೆ. ಟೆಟ್ರಾಪ್ಯಾಕ್ ಅಥವಾ ಬಾಟಲ್ ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಬದಲು ಎಳನೀರನ್ನು ಕುಡಿಯಬೇಕು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲರೂ ಎಳನೀರನ್ನು ಬಹಳ ಆಸಕ್ತಿಯಿಂದ ಕುಡಿಯುತ್ತಾರೆ. ರಜಾದಿನಗಳಲ್ಲಿ ಸಮುದ್ರ ತೀರಗಳಿಗೆ ಹೋದಾಗಲೂ ಎಳನೀರನ್ನು ಕುಡಿಯುವುದು ವಾಡಿಕೆ.
ಎಳನೀರು ನಮ್ಮ ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಜೊತೆಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಮಧುಮೇಹಿಗಳು ಇದನ್ನು ಕುಡಿಯಬಹುದೇ? ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಮತ್ತು ಇದು ಸ್ವಲ್ಪ ಸಿಹಿಯಾಗಿರುವುದರಿಂದ ಸಕ್ಕರೆ ಕಾಯಿಲೆ ಇರುವವರು ಅದನ್ನು ಕುಡಿಯಲು ಭಯಪಡುತ್ತಾರೆ. ಆಹಾರ ತಜ್ಞರ ಪ್ರಕಾರ ಎಳನೀರಿನಲ್ಲಿ ಹಾಲಿಗಿಂತಲೂ ಹೆಚ್ಚು ಪೋಷಕಾಂಶಗಳು ಕಂಡುಬರುತ್ತವೆ.
ಇದರಲ್ಲಿ ಕೊಬ್ಬಿನ ಪ್ರಮಾಣ ಅತ್ಯಲ್ಪ. ಎಳನೀರನ್ನು ನಿಯಮಿತವಾಗಿ ಸೇವಿಸುವವರ ದೇಹವು ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಎಂಟಿಒಕ್ಸಿಡೆಂಟ್ಗಳನ್ನು ಪಡೆಯುತ್ತದೆ. ಎಳನೀರು ದೇಹದ ವಿಷವನ್ನು ಹೊರಹಾಕಲು ಸಹಕಾರಿ. ಅನೇಕ ರೋಗಗಳ ಅಪಾಯವನ್ನೂ ಇದು ತಪ್ಪಿಸುತ್ತದೆ. ಡಯಾಬಿಟೀಸ್ ಇರುವವರು ಎಳನೀರನ್ನು ಕುಡಿಯಬಹುದು. ಅವರು ಈ ನೈಸರ್ಗಿಕ ಪಾನೀಯವನ್ನು ಪ್ರತಿದಿನ ಕುಡಿಯಬೇಕು .
ಏಕೆಂದರೆ ಇದು ಅವರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಇರುವ ಮೆಗ್ನೀಸಿಯಮ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ನೀರಿನ ಕೊರತೆಯನ್ನು ಇದು ಹೋಗಲಾಡಿಸುತ್ತದೆ.
ಮಧುಮೇಹಿಗಳು ಎಳನೀರು ಸೇವನೆಯಿಂದ ಅದ್ಭುತ ಶಕ್ತಿಯನ್ನು ಪಡೆಯುತ್ತಾರೆ. ಎಳನೀರಿನ ಜೊತೆಗೆ ಅದರಲ್ಲಿರುವ ಗಂಜಿಯನ್ನು ಕೂಡ ಮಧುಮೇಹಿಗಳು ತಿನ್ನಬಹುದು. ಏಕೆಂದರೆ ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಎಳನೀರಿನ ಗಂಜಿ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ ಹಾಗಾಗಿ ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಲ್ಲದು.