ನೇಮಕಾತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮಾಡುತ್ತದೆ ಎಂಬ ಅಪಖ್ಯಾತಿ ಹೊಂದಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ಇದೇ ಮೊದಲ ಬಾರಿಗೆ ಸಂದರ್ಶನ ಮುಗಿಸಿದ 24 ಗಂಟೆಯೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಮೂಲಕ ದಾಖಲೆ ಬರೆದಿದೆ.
ಹೌದು, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ 660 ಹುದ್ದೆಗಳಿಗೆ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಮುಗಿಸಿದ 24 ಗಂಟೆ ಒಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಶನಿವಾರ ರಾತ್ರಿಯೇ ಆಯೋಗದ ವೆಬ್ ಸೈಟ್ ನಲ್ಲಿ ಇದು ಲಭ್ಯವಿದ್ದು, ಆಕ್ಷೇಪಣೆಗೆ ಏಳು ದಿನಗಳ ಅವಕಾಶ ನೀಡಲಾಗಿದೆ.
ಈ ಹುದ್ದೆಗಳಿಗೆ 2022ರ ನವೆಂಬರ್ 7ರಂದು ಸಂದರ್ಶನ ಆರಂಭಗೊಂಡಿದ್ದು, 2023 ರ ಜನವರಿ 6 ಶುಕ್ರವಾರ ಪೂರ್ಣಗೊಂಡಿತ್ತು. ತಕ್ಷಣವೇ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದ್ದು, ಆಯೋಗದ ಅನುಮೋದನೆಗೆ ಸಲ್ಲಿಕೆಯಾಗಿತ್ತು. ಈ ಪಟ್ಟಿಗೆ ಆಯೋಗ ಒಪ್ಪಿಗೆ ನೀಡಿದ ಬಳಿಕ ಪ್ರಕಟಿಸಲಾಗಿದೆ.