ಬೆಂಗಳೂರು: ಶಾಲೆ ಮುಗಿದ ಬಳಿಕ ಮನೆಗೆ ವಾಪಸ್ ಆಗಲು ಆಟೋ ಹತ್ತುವಾಗ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳನ್ನು ಬೆಂಗಳೂರಿನ ವಿ.ವಿ.ಪುರಂ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಮಾಡಿ ಪೋಷಕರ ಮಡಿಲು ಸೇರಿಸಿದ್ದಾರೆ.
ಶಾಲೆಯಿಂದ ಮನೆಗೆ ಬರಲು ಆಟೋ ಹತ್ತಿದ್ದ ಮಕ್ಕಳು ಮಧ್ಯೆ ದಾರಿಯಲ್ಲಿ ಆಟೋ ಇಳಿದು ದಾರಿ ತಪ್ಪಿದ್ದಾರೆ. ಆಟೋ ಚಾಲಕ ಅಂಗಡಿ ಬಳಿ ಆಟೋ ನಿಲ್ಲಿಸಿ ಅಂಗಡಿಯಿಂದ ವಾಪಸ್ ಆಗುವಷ್ಟರಲ್ಲಿ ಮಕ್ಕಳಿಬ್ಬರೂ ಆಟೋ ಇಳಿದು ಕೆಲ ದೂರ ನಡೆದು ಹೋಗಿದ್ದಾರೆ. ವಾಪಸ್ ಆಟೋ ಬಳಿ ಬರಲು ದಾರಿ ತಪ್ಪಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾರಿಯಲ್ಲಿ ಹೋಗುತ್ತಿದ್ದ ಓರ್ವ ಯುವತಿ ಬಳಿ ನಮಗೆ ದಾರಿ ತಪ್ಪಿದ್ದು, ಭಯವಾಗುತ್ತಿದೆ ಎಂದು ಮಕ್ಕಳಿಬ್ಬರೂ ಆತಂಕ ವ್ಯಕ್ತಪಡಿಸಿದ್ದಾರೆ. ಯುವತಿ ಮಕ್ಕಳನ್ನು ವಿಚಾರಿಸಿದ್ದು, ಈ ವೇಳೆ 5 ವರ್ಷದ ಬಾಲಕ ತನ್ನ ತಂದೆಯ ಮೊಬೈಲ್ ನಂಬರ್ ಹೇಳಿದ್ದಾನೆ. ಈ ವೇಳೆ ಯುವತಿ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರಿಗೆ ಮಕ್ಕಳು ಹೇಳಿದ ನಂಬರ್ ಗೆ ಕರೆ ಮಾಡುವಂತೆ ತಿಳಿಸಿದ್ದಾಳೆ. ಮಕ್ಕಳಿಬ್ಬರೂ ಸ್ಯಾಟಲೈಟ್ ಬಸ್ಟ್ಯಾಂಡ್ ಬಳಿ ಇದ್ದಾರೆ ಎಂದು ಹೇಳಿ ವ್ಯಕ್ತಿ ಮೊಬೈಲ್ ಕಟ್ ಮಾಡಿದ್ದಾನೆ.
ಇದರಿಂದ ಆತಂಕಗೊಂಡ ಪೋಷಕರು ವಿ.ವಿ ಪುರಂ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕರೆ ಬಂದ ನಂಬರ್ ಲೊಕೇಷನ್ ಪತ್ತೆ ಮಾಡಿ, ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ದೌಡಾಯಿಸಿದ್ದಾರೆ. ಸುಮಾರು 20 ಪೊಲೀಸ್ ಸಿಬ್ಬಂದಿಗಳು ಮಕ್ಕಳಿಗಾಗಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಹುಡುಕಿದ್ದಾರೆ. ಫೋನ್ ಬಂದಿದ್ದ ಮೊಬೈಲ್ ಸಂಖ್ಯೆಯ ಲೊಕೇಷನ್ ನಿಂದ 1 ಕಿ.ಮೀ ದೂರದಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ. ಮನೆಗೆ ಹೋಗಲು ದಾರಿ ಗೊತ್ತಾಗದೇ ಗಾಬರಿಯಲ್ಲಿದ್ದರೂ 5 ವರ್ಷದ ಪುಟ್ಟ ಬಾಲಕ ತನ್ನ ತಂದೆಯ ಮೊಬೈಲ್ ನಂಬರ್ ನೆನಪಿಸಿಕೊಂಡು ಹೇಳಿದ್ದಾನೆ. ಇದರಿಂದ ಪೊಲೀಸರು, ಮಕ್ಕಳು ಕಾಣೆಯಾದ ಮೂರೇ ಗಂಟೆಯಲ್ಲಿ ಮಕ್ಕಳನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.