ಬೆಂಗಳೂರು: ಕೋತಿಯೊಂದು ವೀರಾಂಜನೇಯ ಸ್ವಾಮಿಗೆ ನಮಸ್ಕರಿಸಿ ಅಲ್ಲಿಯೇ ಪ್ರಾಣಬಿಟ್ಟಿರುವ ಅಪರೂಪದ ಘಟನೆಯೊಂದು ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಇಲ್ಲಿನ ರಾಮನಾಯಕನಹಳ್ಳಿಯ ವಿರಾಂಜನೇಯಸ್ವಾಮಿ ದೇವಾಲಯದ ಮುಖ್ಯದ್ವಾರದ ಬಳಿ ತಲೆಯಿಟ್ಟು ಕೋತಿಯೊಂದು ಕೈಮುಗಿದ ರೀತಿಯಲ್ಲಿ ಸಾವನ್ನಪ್ಪಿದೆ. ಇದನ್ನು ಕಂಡ ಗ್ರಾಮಸ್ಥರು ಇದೆಂತಹ ವಿಸ್ಮಯವೆಂದು ಉದ್ಘರಿಸಿದ್ದಾರೆ.
ವೀರಾಂಜನೇಯನ ದೇವಸ್ಥಾನದ ಬಳಿ ಕೋತಿಯೊಂದು ಯಾವಾಗಲೂ ಓಡಾಡಿಕೊಂಡು ಇತ್ತು. ಜುಲೈ 17ರಂದು ಭೀಮನ ಅಮವಾಸ್ಯೆ ದಿನ ದೇವಾಲಯದ ಅರ್ಚಕ ರಾಮಕೃಷ್ಣಯ್ಯ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಕೋತಿ ದೇವಾಲಯದ ಬಾಗಿಲು ಬಳಿ ಮಲಗಿರುವುದನ್ನು ನೋಡಿದ್ದಾರೆ. ಸಮೀಪಕ್ಕೆ ಬಂದು ನೋಡಿದಾಗ ಕೋತಿ ಕೈಮುಗಿದುಕೊಂಡಿರುವ ರೀತಿಯಲ್ಲಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ವೀರಾಂಜನೇಯನಿಗೆ ತಲೆಬಾಗಿ ನಮಿಸಿ ಕೈಮುಗಿದು ಪ್ರಾಣಬಿಟ್ಟ ಕೋತಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.