ರಾಜ್ಯ ವಿಧಾನಸಭೆಗೆ ಇನ್ನು ಎರಡ್ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಚುನಾವಣಾ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆ ಅನುಷ್ಠಾನಗೊಳ್ಳಲಿದೆ ಎಂಬ ಕಾರಣಕ್ಕೆ ಅದಕ್ಕೂ ಮುನ್ನ ಕೆಲವೊಂದು ವರ್ಗಾವಣೆಗಳು ನಡೆಯುತ್ತಿದ್ದು, ಈ ಆತಂಕದಲ್ಲಿದ್ದ ಕಂದಾಯ ಇಲಾಖೆ ಸಿಬ್ಬಂದಿಗೆ ಗುಡ್ ನ್ಯೂಸ್ ಇಲ್ಲಿದೆ.
ಕಂದಾಯ ಇಲಾಖೆ ಅಧಿಕಾರಿ / ನೌಕರರ ವರ್ಗಾವಣೆಗೆ ಸರ್ಕಾರ ಬ್ರೇಕ್ ಹಾಕಿದ್ದು, ಚುನಾವಣಾ ಆಯೋಗದ ಆದೇಶದಂತೆ ಈಗ ಮತದಾರರ ಪಟ್ಟಿಯ ನೋಂದಣಿ, ಪರಿಷ್ಕರಣೆ ಸೇರಿದಂತೆ ಹಲವು ಕಾರ್ಯಗಳು ನಡೆಯುತ್ತಿರುವುದರಿಂದ ವರ್ಗಾವಣೆ ನಡೆದರೆ ಈ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೀಗಾಗಿ ತಹಸಿಲ್ದಾರ್, ಉಪ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆ ವರ್ಗಾವಣೆಗೆ ತಡೆ ನೀಡಲಾಗಿದ್ದು, ಮುಖ್ಯಮಂತ್ರಿ, ಕಂದಾಯ ಸಚಿವರಿಂದ ಅನುಮೋದನೆಗೊಂಡಿರುವ ವರ್ಗಾವಣೆ ಅಥವಾ ನಿಯೋಜನೆಗಳನ್ನು ಮಾತ್ರ ಸಲ್ಲಿಸಲು ಸೂಚಿಸಲಾಗಿದೆ.