ತೆರಿಗೆ ಪದ್ಧತಿ ಇಂದು ನಿನ್ನೆಯದಲ್ಲ. ಬಹಳ ಪುರಾತನ ಕಾಲದಿಂದಲೂ ತೆರಿಗೆ ಸಂಗ್ರಹ ರೂಢಿಯಲ್ಲಿದೆ. ಬ್ರಿಟನ್‌ನಲ್ಲಿ ಒಂದು ರೀತಿಯ ಹೇಡಿತನದ ತೆರಿಗೆ ಪ್ರಚಲಿತದಲ್ಲಿತ್ತು. ಯುದ್ಧ ಮಾಡಲಾಗದ ಅಸಹಾಯಕರು, ಯುದ್ಧದಲ್ಲಿ ಪಾಲ್ಗೊಳ್ಳುವ ಧೈರ್ಯವಿಲ್ಲದವರು ತೆರಿಗೆಯನ್ನು ಪಾವತಿಸುತ್ತಿದ್ದರು.
12 ರಿಂದ 13 ನೇ ಶತಮಾನದವರೆಗೆ ಈ ನಿಯಮ ಜಾರಿಯಲ್ಲಿತ್ತು. ಯುದ್ಧಕ್ಕೆ ಹೆದರಿದ ಶ್ರೀಮಂತರು ಹೇಡಿತನದ ತೆರಿಗೆಯನ್ನು ಪಾವತಿಸಿ ಯುದ್ಧದಿಂದ ದೂರ ಉಳಿಯುವ ಆಯ್ಕೆಯನ್ನು ಹೊಂದಿದ್ದರು.
ಸಿರಿವಂತರು ಮತ್ತು ಸಾಮಂತರು ಯುದ್ಧದಲ್ಲಿ ಅಂಗವಿಕಲರಾಗುತ್ತೇವೆ ಎಂಬ ಭಯದಿಂದ ತೆರಿಗೆ ಕಟ್ಟುತ್ತಿದ್ದರು. ಮಧ್ಯಕಾಲೀನ ಯುಗದಲ್ಲಿ ಈ ತೆರಿಗೆಯನ್ನು ಪಾವತಿಸುವ ಮೂಲಕ ಅನೇಕರು ಯುದ್ಧದಿಂದ ದೂರ ಉಳಿಯುತ್ತಿದ್ದರು. ಈ ತೆರಿಗೆ ಪದ್ಧತಿ ಕಿಂಗ್ ಹೆನ್ರಿ I (1100-1135) ಸ್ಟೀಫನ್ (1135-1154) ರ ಆಳ್ವಿಕೆಯಲ್ಲಿ ಮುಂದುವರೆಯಿತು. ಮಧ್ಯಕಾಲೀನ ಯುಗದಲ್ಲಿ ದೇಶಗಳ ನಡುವಿನ ಯುದ್ಧವು ಸಾಮಾನ್ಯವಾಗಿತ್ತು. ಒಂದು ದೇಶ ಇತರ ದೇಶಗಳ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಳ್ಳುತ್ತಿತ್ತು. ಹಾಗಾಗಿ ಆ ದಿನಗಳಲ್ಲಿ ಪ್ರತಿಯೊಬ್ಬ ಯುವಕನೂ ಸೇನೆಗೆ ಸೇರುವುದು ಅನಿವಾರ್ಯವಾಗಿತ್ತು. ಆದರೆ ಶ್ರೀಮಂತ ಯುವಕರು ಇದಕ್ಕೂ ಪರಿಹಾರ ಕಂಡುಕೊಂಡರು.
ಈ ತೆರಿಗೆಯನ್ನು ಸ್ಕ್ಯೂಟೇಜ್ ಅಥವಾ ಶೀಲ್ಡ್ ಮನಿ ಎಂದೂ ಕರೆಯುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ತೆರಿಗೆಯನ್ನು ಯುದ್ಧದ ದಿನಗಳಲ್ಲಿ ಮಾತ್ರವಲ್ಲ ಸಾಮಾನ್ಯ ದಿನಗಳಲ್ಲಿಯೂ ಪಾವತಿಸಬೇಕಾಗಿತ್ತು. ಆ ಹಣದಿಂದ ಯುವ ಶ್ರೀಮಂತರ ಬದಲು ಬೇರೆಯವರನ್ನು ಸೇನೆಯಲ್ಲಿ ನೇಮಿಸಿ ತರಬೇತಿ ನೀಡಬಹುದು. ಬ್ರಿಟನ್ ನಂತರ 12 ಮತ್ತು 13 ನೇ ಶತಮಾನಗಳಲ್ಲಿ, ಇತರ ದೇಶಗಳು ಸಹ ಇದನ್ನು ಅಳವಡಿಸಿಕೊಂಡವು. ಈ ತೆರಿಗೆಯನ್ನು ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸಹ ರೂಢಿಗೆ ತರಲಾಯಿತು.
ಆದಾಯವನ್ನು ಹೆಚ್ಚಿಸಲು ಈ ತೆರಿಗೆಯನ್ನು ಬಳಸಲಾಯಿತು. ಆದರೆ ಈ ತೆರಿಗೆಯನ್ನು 14 ನೇ ಶತಮಾನದಲ್ಲಿ ನಿಷೇಧಿಸಲಾಯಿತು. ಆ ಸಮಯದಲ್ಲಿ ಕಿಟಕಿಗಳ ಮೇಲೆ ತೆರಿಗೆ ವಿಧಿಸಲಾಯಿತು. ಇದನ್ನು 1696ರಲ್ಲಿ ಬ್ರಿಟಿಷ್ ರಾಜ ವಿಲಿಯಂ III ಪ್ರಾರಂಭಿಸಿದ್ದ. ದೊಡ್ಡ ಅರಮನೆಗಳಲ್ಲಿ ಅನೇಕ ಕಿಟಕಿಗಳಿದ್ದವು. 6 ಕಿಟಕಿಗಳ ನಂತರ ಈ ತೆರಿಗೆ ಅನ್ವಯವಾಗುತ್ತಿತ್ತು. ಈ ತೆರಿಗೆಯನ್ನು ಸಂಗ್ರಹಿಸುವುದು ಸುಲಭ, ಏಕೆಂದರೆ ಆಗ ಅಪಾರ್ಟ್‌ಮೆಂಟ್‌ಗಳು ಇರಲಿಲ್ಲ. ಪ್ರತಿ ಮನೆಗೂ ಹತ್ತಾರು ಕಿಟಕಿಗಳಿರುತ್ತಿದ್ದವು.