ಮೊಬೈಲ್ ಇಂದು ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಮೂಲಕವೇ ಹಣದ ವಹಿವಾಟು, ಆನ್ಲೈನ್ ಮೂಲಕ ಶಾಪಿಂಗ್, ಆಹಾರ ತರಿಸುವುದೂ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳನ್ನು ಕೂತಲ್ಲಿಯೇ ಮಾಡಬಹುದಾಗಿದೆ. ಆದರೆ ಮೊಬೈಲ್ ಕಳೆದು ಹೋದ ದಿಕ್ಕೇ ತೋಚದಂತಾಗುತ್ತದೆ.
ಮೊಬೈಲ್ ಪತ್ತೆ ಹಚ್ಚಲು ಕೆಲವು ಆಪ್ ಗಳು ಪ್ಲೇ ಸ್ಟೋರ್ ನಲ್ಲಿ ಈ ಮೊದಲು ಇದ್ದವಾದರೂ ಇದೀಗ ಕೇಂದ್ರ ಸರ್ಕಾರವೇ ಪೋರ್ಟಲ್ ಒಂದನ್ನು ಆರಂಭಿಸಿದ್ದು, CEIR (ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಹೆಸರಿನ ಈ ಪೋರ್ಟಲ್ ಮೂಲಕ ಮೊಬೈಲ್ ಪತ್ತೆ ಹಚ್ಚುವುದು ಮತ್ತಷ್ಟು ಸುಲಭವಾಗಲಿದೆ.
ಮೊಬೈಲ್ ಕಳೆದುಕೊಂಡಾಗ ಮಾಡಬೇಕಾದ್ದೇನು ? ಮೊಬೈಲ್ ಕಳೆದುಕೊಂಡ ವ್ಯಕ್ತಿ ಈ ಪೋರ್ಟಲ್ ನಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರಿಗೆ ನೀಡಿದ ದೂರಿನ ಪ್ರತಿ (ಒಂದು ವೇಳೆ ಠಾಣೆಗೆ ಹೋಗಿ ದೂರು ನೀಡಿದ್ದರೆ ಕರ್ನಾಟಕ ರಾಜ್ಯ ಪೊಲೀಸ್ ವೆಬ್ಸೈಟ್ಗೆ ಹೋಗಿ ಇ ಲಾಸ್ಟ್ ಕಾಲಂನಲ್ಲಿ ವಿವರ ನೀಡಿದರೆ ದೂರಿನ ಪ್ರತಿ ಲಭಿಸುತ್ತದೆ), ಮೊಬೈಲ್ ಖರೀದಿಸಿದ ಬಿಲ್, ಆಧಾರ್ ಅಥವಾ ಗುರುತಿನ ಚೀಟಿ ನಮೂದಿಸಬೇಕಾಗುತ್ತದೆ.
ಅಲ್ಲದೆ ಮೊಬೈಲ್ ಬಿಲ್ ನಲ್ಲಿ ಐಎಂಇ ನಂಬರ್ ಅಗತ್ಯವಾಗಿದ್ದು ಎಲ್ಲಿ ಕಳೆದುಕೊಂಡಿದ್ದೇವೆ ಎಂಬುದರ ವಿವರ ಸಹ ನೀಡಬೇಕು. ಜೊತೆಗೆ ಕಳೆದುಕೊಂಡ ಮೊಬೈಲ್ ನಲ್ಲಿದ್ದ ನಕಲು ಸಿಮ್ ಕಾರ್ಡ್ ಪಡೆಯಬೇಕಾಗಿದ್ದು, ಇದಕ್ಕೆ ಒಂದು ಓಟಿಪಿ ಬರುತ್ತದೆ. ನಂತರ ಆ ಮೊಬೈಲ್ ಬ್ಲಾಕ್ ಆಗಲಿದ್ದು, ಈ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಮತ್ತೊಂದು ಸಿಮ್ ಬಳಸಿ ಉಪಯೋಗಿಸಲು ಆರಂಭಿಸಿದ ತಕ್ಷಣ ಸಿಇಎನ್ ಅಪರಾಧ ಠಾಣೆಗೆ ಮಾಹಿತಿ ಹೋಗುತ್ತದೆ. ಈ ಮೂಲಕ ಸುಲಭವಾಗಿ ಮೊಬೈಲ್ ಮರಳಿ ಪಡೆಯಬಹುದು.