ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೊಡುವ ಊಟದ ಬಿಲ್ ನೋಡಿ ಅಚ್ಚರಿಗೊಂಡಿದ್ದಾರೆ. ಒಂದು ಊಟಕ್ಕೆ ದುಬಾರಿ ವೆಚ್ಚದ ಬಿಲ್ ನೀಡುತ್ತಿರುವ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ-ಸಾಂಬಾರ್ ಊಟಕ್ಕೆ 92 ರೂಪಾಯಿ ಬಿಲ್ ಮಾಡಲಾಗಿದೆ. ಒಂದು ಬಾಳೆಹಣ್ಣಿಗೆ 8 ರೂಪಾಯಿ ನಿಗದಿ ಮಾಡಿದ್ದಾರೆ. ಕಡತ ಪರಿಶೀಲಿಸಿದ ಡಿಸಿ, ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿ ಒಂದು ಊಟಕ್ಕೆ 10 ರೂಪಾಯಿ ಇದೆ. ನೀವ್ಯಾಕೆ 92 ರೂಪಾಯಿ ಬಿಲ್ ಹಾಕಿದ್ದೀರಿ? ನಾನೂ ಕೂಡ ಮುದ್ದೆ ತಿನ್ನುತ್ತೇನೆ. ಒಂದು ಮುದ್ದೆಗೆ ರಾಗಿ ಮಿಲ್ ಮಾಡಿ ಹಿಟ್ಟು ತಂದು ಮುದ್ದೆ ಮಾಡಿಸಿದರೆ 15 ರೂಪಾಯಿ ಆಗುತ್ತದೆ. ಇಲ್ಲಿ 92 ರೂಪಾಯಿ ನಿಗದಿ ಪಡಿಸಲಾಗಿದೆ. ಈ ಟೆಂಡರ್ ಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಒಂದು ಬಾಳೆ ಹಣ್ಣಿಗೆ 8 ರೂಪಾಯಿ, ಒಂದು ಮೊಟ್ಟೆಗೆ 10 ರೂಪಾಯಿ ಬಿಲ್ ಹಾಕಿರುವುದನ್ನು ಕಂಡ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾವು ಅಂಗನವಾಡಿಗೆ 6 ರೂಪಾಯಿಗೆ 2 ಮೊಟ್ಟೆ ಕೊಡುತ್ತಿದ್ದೇವೆ. ಇಲ್ಲಿ 10 ರೂಪಾಯಿ ಯಾಕೆ? ಒಂದು ಬಾಳೆ ಹಣ್ಣಿಗೆ 8 ರೂಪಾಯಿ ನಿಗದಿ ಪಡಿಸಿದ್ದೀರಿ ಕಾರಣವೇನು? ದರ ನಿಗದಿ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್ ನಯಿಂ ವುನ್ನೀಸಾ ಅವರಿಗೆ ಸೂಚಿಸಿದ್ದಾರೆ.