ಬಜಾಜ್ ಆಟೋ ಮತ್ತೊಂದು ಪಲ್ಸರ್ ಬೈಕ್ ಅನ್ನು ರಸ್ತೆಗಿಳಿಸಿದೆ. ಹೊಸ ಪಲ್ಸರ್ N150 ಅನ್ನು ಬಿಡುಗಡೆ ಮಾಡಿದೆ. ವರದಿಗಳ ಪ್ರಕಾರ 2024ರ ಅಂತ್ಯದ ವೇಳೆಗೆ ಭಾರತದಲ್ಲಿ 6 ಹೊಸ ಪಲ್ಸರ್ ಮಾದರಿಗಳನ್ನು ಬಜಾಜ್ ಕಂಪನಿ ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಮೊದಲನೆಯದು ಪಲ್ಸರ್ N150.
ಈ ಬೈಕ್‌ನ ಆರಂಭಿಕ ಬೆಲೆ 1.18 ಲಕ್ಷ ರೂಪಾಯಿ. ಪಲ್ಸರ್ ಶ್ರೇಣಿಯಲ್ಲಿನ 13 ನೇ ಮಾದರಿ ಇದು. ಮೂಲ ಪಲ್ಸರ್ 150 ಮತ್ತು ಪಲ್ಸರ್ P150 ನಂತರ ಮೂರನೇ 150cc ಪಲ್ಸರ್ ಬೈಕ್ ಇದಾಗಿದೆ. ಹೊಸ ಮಾಡೆಲ್ ಪರಿಚಯಿಸುವುದರೊಂದಿಗೆ ಹಳೆಯ ಪಲ್ಸರ್ ಒಂದನ್ನು ಬಜಾಜ್ ಕಂಪನಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಹೊಸ ಪಲ್ಸರ್ N150 ವಿನ್ಯಾಸವು ಹಳೆಯದನ್ನೇ ಹೋಲುತ್ತದೆ. ಎರಡೂ ಬದಿಗಳಲ್ಲಿ ಸಿಂಗಲ್-ಪಾಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳಿವೆ. N160ಯಲ್ಲಿ ಸ್ಪ್ಲಿಟ್-ಸ್ಟೈಲ್ ಸೀಟ್ ಮತ್ತು ಸ್ಪ್ಲಿಟ್ ಗ್ರ್ಯಾಬ್ ರೈಲ್ ಇದ್ದರೆ, ಪಲ್ಸರ್ N150 ಸಿಂಗಲ್-ಪೀಸ್ ಗ್ರಾಬ್ ರೈಲ್‌ನೊಂದಿಗೆ ಸಿಂಗಲ್-ಪೀಸ್ ಸೀಟ್ ಅನ್ನು ಪಡೆಯುತ್ತದೆ.
ಬಜಾಜ್ N150 ಬೈಕ್, ರೇಸಿಂಗ್ ರೆಡ್, ಎಬೊನಿ ಬ್ಲಾಕ್ ಮತ್ತು ಮೆಟಾಲಿಕ್ ಪರ್ಲ್ ವೈಟ್ ಹೀಗೆ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಪಲ್ಸರ್ N150 149.68cc, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಸಸ್ಪೆನ್ಷನ್ ಬಗ್ಗೆ ಹೇಳೋದಾದ್ರೆ, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊ-ಶಾಕ್ ಇದರಲ್ಲಿವೆ. ಬ್ರೇಕಿಂಗ್ ಅನ್ನು 240 ಎಂಎಂ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್‌ನಿಂದ ಮಾಡಲಾಗುತ್ತದೆ. ಇದನ್ನು ಸಿಂಗಲ್-ಚಾನಲ್ ಎಬಿಎಸ್‌ಗೆ ಜೋಡಿಸಲಾಗಿದೆ. ಹೊಸ ಪಲ್ಸರ್ N150 ಸುಮಾರು 45-50 ಕಿಮೀ ಮೈಲೇಜ್ ಕೊಡಬಲ್ಲದು. ಇದರ ತೂಕ ಪಲ್ಸರ್ N160 ಗಿಂತ 7 ಕೆಜಿ ಕಡಿಮೆ.