ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ ತಯಾರಾಗುವ ಈ ಆಭರಣಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಜಾಸ್ತಿಯಿದೆ.
ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಇದು ತಯಾರಾಗುತ್ತದೆ. ರಾಜಸ್ತಾನದ ಜೈಪುರದಲ್ಲಿ ತಯಾರಾಗುವ ಮಣ್ಣಿನ ಆಭರಣ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬಾರ್ಮರ್ ಜಿಲ್ಲಾ ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ ವಿಶಾಲಾ ಗ್ರಾಮ ಇದಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕುಶಲಕರ್ಮಿಗಳು ಸುಮಾರು 40 ವರ್ಷಗಳಿಂದ ಮಣ್ಣಿನ ಆಭರಣ ಸಿದ್ಧಪಡಿಸುತ್ತಿದ್ದಾರೆ.
ಮಣ್ಣಿನ ಆಭರಣ ತಯಾರಿಸಲು ಒಂದು ಗಂಟೆಯಿಂದ ಒಂದು ದಿನಗಳವರೆಗೆ ಸಮಯ ಬೇಕಾಗುತ್ತದೆ. 10 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ವಿದೇಶಿಗರ ಕಣ್ಣಿಗೆ ಈ ಆಭರಣ ಬಿದ್ರೆ ಅವ್ರು ಬಿಡುವುದಿಲ್ಲವಂತೆ. ಆಭರಣಕ್ಕೆ ಎಷ್ಟು ಬೇಕಾದ್ರೂ ಹಣ ನೀಡಲು ಸಿದ್ಧರಾಗ್ತಾರಂತೆ. ಮಣ್ಣನ್ನು ಸುಡುವುದ್ರಿಂದ ಆಭರಣ ಹಗುರವಾಗಿರುತ್ತದೆ. ಸೀರೆಯ ಅಂದವನ್ನು ಇವು ಹೆಚ್ಚಿಸುತ್ತವೆ. ಇಲ್ಲಿನ ಕುಟುಂಬಸ್ಥರು ಸ್ಥಳೀಯ ಮಾರುಕಟ್ಟೆ ಜೊತೆಗೆ ದೇಶದಾದ್ಯಂತ ನಡೆಯುವ ಮೇಳಗಳಲ್ಲಿ ಪಾಲ್ಗೊಂಡು ತಾವು ತಯಾರಿಸಿದ ಆಭರಣಗಳನ್ನು ಮಾರಾಟ ಮಾಡ್ತಾರೆ.