
ನೆದರ್ಲೆಂಡ್ ಮೂಲದ ವೈದ್ಯಕೀಯ ತಂತ್ರಜ್ಞಾನ ಸಾಧನಗಳ ತಯಾರಕ ಕಂಪನಿ ಫಿಲಿಪ್ಸ್ ಮತ್ತೆ ಉದ್ಯೋಗಿಗಳ ವಜಾ ಪ್ರಕ್ರಿಯೆಗೆ ಮುಂದಾಗಿದೆ. ಸುಮಾರು 6000ಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ಕಿತ್ತು ಹಾಕಲು ಫಿಲಿಪ್ಸ್ ಮುಂದಾಗಿದೆ.
ಫಿಲಿಪ್ಸ್ ಕಂಪನಿಯ ಸ್ಲೀಪ್ ರೆಸ್ಪಿರೇಟರ್ ಡಿವೈಸ್‌ಗಳು ದೋಷಯುಕ್ತವಾಗಿವೆ. ಪರಿಣಾಮ ಕಂಪನಿ ಅವುಗಳನ್ನೆಲ್ಲ ಹಿಂಪಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇದೇ ಕಾರಣ ಮುಂದಿಟ್ಟುಕೊಂಡು ಫಿಲಿಪ್ಸ್ ಮತ್ತೆ 6000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯ್ ಜಾಕೋಬ್ಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2025 ರ ವರೆಗೂ ಸಂಸ್ಥೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹಾಗಾಗಿ ಮತ್ತೆ ವಜಾ ಪ್ರಕ್ರಿಯೆಗೆ ಮುಂದಾಗಿದ್ದೇವೆಂದು ಸಮರ್ಥಿಸಿಕೊಂಡಿದ್ದಾರೆ. ಮೂರು ತಿಂಗಳ ಹಿಂದಷ್ಟೆ 4000 ಉದ್ಯೋಗಿಗಳನ್ನು ಫಿಲಿಪ್ಸ್ ಕಂಪನಿ ವಜಾ ಮಾಡಿತ್ತು. ಅರ್ಧದಷ್ಟು ಉದ್ಯೋಗ ಕಡಿತವನ್ನು ಈ ವರ್ಷ ಮಾಡಲಾಗುವುದು, ಉಳಿದರ್ಧವನ್ನು 2025ರ ವೇಳೆಗೆ ಸಾಕಾರಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.
ಫಿಲಿಪ್ಸ್ ಹಲವಾರು ಮಹತ್ವದ ಕಾರ್ಯಾಚರಣೆಯಲ್ಲಿ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಾಕೋಬ್ಸ್ ಹೇಳಿದ್ದಾರೆ. ಸ್ಲೀಪ್ ರೆಸ್ಪಿರೇಟರ್‌ಗಳಲ್ಲಿ ದೋಷ ಕಂಡು ಬಂದಿದ್ದರಿಂದ ಅವುಗಳ ಮಾರುಕಟ್ಟೆ ಮೌಲ್ಯ ಶೇ.70ರಷ್ಟು ಕುಸಿದಿದೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಚಿಕಿತ್ಸೆ ನೀಡಲು ಇವುಗಳನ್ನು ಬಳಸಲಾಗುತ್ತದೆ. ಆದ್ರೆ ಡಿವೈಸ್‌ಗಳಲ್ಲಿ ದೋಷವಿರುವುದರಿಂದ ಲಕ್ಷಾಂತರ ವೆಂಟಿಲೇಟರ್‌ಗಳನ್ನು ಹಿಂಪಡೆಯಬೇಕಾಗುತ್ತದೆ.