ಮಕ್ಕಳನ್ನು ಬೆಳೆಸುವುದು ಬಲು ಸುಲಭ ಎಂದುಕೊಳ್ಳಬೇಡಿ. ಕೆಲವೊಮ್ಮೆ ಮೊಂಡು ಹಿಡಿಯುವುದು ಕಂಡಾಗ ನಾವು ಬೆಳೆಸಿದ ರೀತಿಯಲ್ಲೇ ತಪ್ಪಾಗಿದೆಯೇ ಎಂಬ ಸಂಶಯವೂ ಮೂಡದಿರದು. ತಪ್ಪಿಲ್ಲದಂತೆ ಅಲ್ಲವಾದರೂ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದು ಬಹಳ ಮುಖ್ಯ.
ಸಣ್ಣ ವಯಸ್ಸಿನಿಂದಲೂ ಮಕ್ಕಳಿಗೆ ತಮ್ಮ ಕೆಲಸಗಳನ್ನು ತಾವೇ ಮಾಡಲು ಹೇಳಿಕೊಡಿ. ಹಾಸಿಗೆ, ಹೊದಿಕೆ ಮಡಿಸಲು ಹೇಳಿಕೊಡಿ. ಶೂ ಪಾಲಿಶ್ ಮಾಡುವುದು, ಒಳ ಉಡುಪುಗಳನ್ನು ತೊಳೆಯಲು ಹೇಳಿಕೊಡಿ.
ಸಮಯ ಅವಕಾಶ ಸಿಕ್ಕಾಗ ಅಡುಗೆ ಮನೆಯಲ್ಲಿ ಸಹಾಯಕ್ಕೆ ಕರೆಯಿರಿ. ತಪ್ಪಾದರೆ ತಿದ್ದಿಕೊಳ್ಳಲು ಅವಕಾಶ ಕೊಡಿ. ಅದರಿಂದಲೂ ಅವರು ಪಾಠ ಕಲಿಯುತ್ತಾರೆ ಎಂಬುದನ್ನು ನೆನಪಿಡಿ. ಹೋಮ್ ವರ್ಕ್ ಮಾಡಿಕೊಳ್ಳಲು ಬಿಡಿ.
ಡ್ರಾಯಿಂಗ್ ಹೇಳಿಕೊಟ್ಟ ಬಳಿಕ ಅವರದೇ ಆದ ರೀತಿಯಲ್ಲಿ ಮಾಡಲು ಬಿಡಿ. ಪುಸ್ತಕ, ಪೆನ್ನು ಅವರಿಚ್ಛೆಯಂತೆ ಕೊಟ್ಟುಬಿಡಿ. ರಫ್ ಪುಸ್ತಕದಲ್ಲಿ ಹೇಗೆ ಬೇಕಿದ್ದರೂ ಬಣ್ಣ ತುಂಬಲು ಬಿಡಿ.
ಮನೆಯೊಳಗೂ ಹೊರಗೂ ಆಡಲು ಬಿಡಿ. ಸರಿಯಾದ ಆಟ, ಮಕ್ಕಳೊಡನೆ ಒಡನಾಟ ಸಿಗದೆ ಹೋದರೆ ಮಕ್ಕಳು ನಾಚಿಕೆ ಸ್ವಭಾವದವರಾಗಿ, ಬದುಕಿನ ಸವಾಲುಗಳು ಎದುರಿಸಲು ಅಸಮರ್ಥರಾದಾರು.