ಸಾಮಾನ್ಯವಾಗಿ ಭಿಕ್ಷುಕರು ಮನೆ ಬಳಿ ಬಂದಾಗ ಅವರನ್ನು ತಿರಸ್ಕಾರ ನೋಟದಿಂದ ನೋಡುವವರೇ ಜಾಸ್ತಿ. ಏಕೆಂದರೆ ಕೆಲವರು ಗಟ್ಟಿಮುಟ್ಟಾಗಿದ್ದರು ಸಹ ಕಷ್ಟ ಪಡಲು ಹಿಂದೇಟು ಹಾಕಿ ಭಿಕ್ಷೆಗೆ ಮುಂದಾಗುತ್ತಾರೆ.
ಆದರೆ ಅನಾರೋಗ್ಯ ಪೀಡಿತರು, ವಯಸ್ಸಾದವರು ಭಿಕ್ಷೆಗೆ ಬಂದಾಗ ಮನ ಕರಗಿ ಅಂತವರಿಗೆ ನೆರವು ನೀಡುತ್ತಾರೆ. ಆದರೆ ಭಿಕ್ಷುಕರಿಗೂ ಜಾತ್ರೆ ಇದೆ ಎಂದರೆ ನೀವು ನಂಬಲೇಬೇಕು.
ಹೌದು, ಇಂತಹದೊಂದು ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದ್ದು, ಶಿವರಾತ್ರಿ ಅಮಾವಾಸ್ಯೆಯಂದು ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕ ಪಿತೃ ತರ್ಪಣ ನಡೆಸಿ ಭಿಕ್ಷಕರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುತ್ತಾರೆ.
ಅನಾದಿ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದ್ದು, ಪಿತೃಗಳ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬ ಕಾರಣಕ್ಕೆ ಭಿಕ್ಷುಕರಿಗೆ ವಿಶೇಷ ದಾನಗಳನ್ನು ನೀಡಲಾಗುತ್ತದೆ. ಹೀಗಾಗಿಯೇ ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಿಕ್ಷುಕರು ರಾಜ್ಯ, ಅಂತಾರಾಜ್ಯಗಳಿಂದ ಗೋಕರ್ಣಕ್ಕೆ ಬರುತ್ತಾರೆ.