ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ ಇಲ್ಲ. ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಕಾಣ್ತಿರೋ ಭಾರತದಲ್ಲೂ ಅತ್ಯಂತ ಶ್ರೀಮಂತ ಗ್ರಾಮವೊಂದಿದೆ.
ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಯೂ ಶ್ರೀಮಂತರೇ. ಇಲ್ಲಿನ ಜನರ ಬಳಿ 5000 ಕೋಟಿ ನಗದು ಇದೆ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಐದರಿಂದ 15 ಲಕ್ಷ ರೂಪಾಯಿ ಹಣವಿದೆ.
ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಿರೋದು ಭಾರತದ ಗುಜರಾತ್‌ನಲ್ಲಿ. ಗುಜರಾತ್‌ನ ಮದ್ಪಾರಾ ಗ್ರಾಮವು ಅತ್ಯಂತ ಸಿರಿವಂತ ಹಳ್ಳಿ ಎನಿಸಿಕೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಲಕ್ಷಗಟ್ಟಲೆ ನಗದು ಹೊಂದಿದ್ದಾರೆ. ಈ ಗ್ರಾಮದೊಳಗೆ ಸುಮಾರು 17 ಬ್ಯಾಂಕ್‌ಗಳ ಶಾಖೆಗಳಿವೆ. ಈ ಬ್ಯಾಂಕ್‌ಗಳಲ್ಲಿ ಹಣ ತೆಗೆಯಲು ಮತ್ತು ಠೇವಣಿ ಇಡಲು ಪ್ರತಿನಿತ್ಯ ಗ್ರಾಮಸ್ಥರ ದಂಡೇ ಇರುತ್ತದೆ.
ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂಪಾಯಿ
ಇಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 15 ಲಕ್ಷ ರೂಪಾಯಿ ಇದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರಿಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ನಗರವನ್ನೂ ಮೀರಿಸುವಂತಹ ಸೌಲಭ್ಯಗಳು ಈ ಹಳ್ಳಿಯಲ್ಲಿವೆ. ಇಲ್ಲಿನ ಜನರು ಐಷಾರಾಮಿ ಬದುಕು ನಡೆಸ್ತಾರೆ. ಎಸಿ, ಕೂಲರ್, ಫ್ರಿಡ್ಜ್, ಸೋಲಾರ್ ಪ್ಯಾನೆಲ್ ಪ್ರತಿ ಮನೆಯಲ್ಲೂ ಇದೆ.
ಆಧುನಿಕ ಆಸ್ಪತ್ರೆಗಳು, ದೊಡ್ಡ ಶಾಲೆಗಳು, ಪ್ರಾಚೀನ ದೇವಾಲಯಗಳು, ಗೋಶಾಲೆಗಳು, ಕೆರೆ, ಉದ್ಯಾನವನ ಹೀಗೆ ಪ್ರತಿ ಸೌಲಭ್ಯವೂ ಇರುವ ಹಳ್ಳಿ ಇದು. ಈ ಗ್ರಾಮ ಇಷ್ಟೊಂದು ಸಿರಿವಂತಿಕೆಯಿಂದ ಕೂಡಿರಲು ಕಾರಣ ಇಲ್ಲಿನ ಶೇ.65ರಷ್ಟು ಜನರು ಅನಿವಾಸಿ ಭಾರತೀಯರು. ಇವರೆಲ್ಲ ವಿದೇಶದಲ್ಲಿರೋ ತಮ್ಮ ಸಂಬಂಧಿಕರಿಗೆ ಪ್ರತಿ ತಿಂಗಳು ಡಾಲರ್‌ಗಳಲ್ಲಿ ಅಪಾರ ಹಣವನ್ನು ಕಳುಹಿಸುತ್ತಾರೆ. ಗ್ರಾಮಸ್ಥರ ಮಕ್ಕಳು ದೊಡ್ಡ ಶಾಲೆಗಳಲ್ಲಿ ಓದುತ್ತಿದ್ದಾರೆ.