ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸುಡುವ ಶಾಖ, ಬಿಸಿ ಗಾಳಿ ಮತ್ತು ಬಿಸಿಲು ನಮ್ಮನ್ನು ತುಂಬಾ ಅಸ್ವಸ್ಥಗೊಳಿಸುತ್ತದೆ. ಈ ಋತುವಿನಲ್ಲಿ ದೇಹದಲ್ಲಿ ನೀರಿನ ಕೊರತೆಯಿರದಂತೆ ನೋಡಿಕೊಳ್ಳಬೇಕು.ಜೊತೆಗೆ ದೇಹವನ್ನು ಆಂತರಿಕವಾಗಿಯೂ ತಂಪಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಬೇಸಿಗೆಯ ಧಗೆ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬೇಕು. ಇದು ಸೆಖೆಯಿಂದಲೂ ಪರಿಹಾರ ನೀಡುತ್ತದೆ.
ಮಜ್ಜಿಗೆ: ಬ್ಲಾಕ್ ಸಾಲ್ಟ್ ಬೆರೆಸಿದ ತಿಳಿ ಮಜ್ಜಿಗೆ ಕುಡಿದರೆ ದೇಹ ತಂಪಾಗುತ್ತದೆ. ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ಸಂದರ್ಭದಲ್ಲಿ ಜೀರ್ಣಾಂಗ ವ್ಯವಸ್ಥೆಯು ಹದಗೆಡದಂತೆ ಮಜ್ಜಿಗೆ ನೋಡಿಕೊಳ್ಳುತ್ತದೆ.
ಹಸಿರು ತರಕಾರಿಗಳು: ಪ್ರತಿಯೊಂದು ಸಂದರ್ಭದಲ್ಲೂ ಹಸಿರು ತರಕಾರಿಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಶಾಖದಿಂದ ಪರಿಹಾರವನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತರಕಾರಿಗಳು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಇರಿಸುತ್ತವೆ. ಮತ್ತು ದೇಹವನ್ನು ತಂಪಾಗಿ ಇಡುತ್ತವೆ.
ನಿಂಬೆ: ನಿಂಬೆಯಲ್ಲಿ ವಿಟಮಿನ್ ಸಿ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದು ನಮ್ಮನ್ನು ಶಾಖದಿಂದ ರಕ್ಷಿಸುವುದಲ್ಲದೆ, ಒಳಗಿನಿಂದ ತಾಜಾತನ ನೀಡುತ್ತದೆ. ಬೇಸಿಗೆಯಲ್ಲಿ ನಿಂಬೆ ಪಾನಕ ಮಾಡಿಕೊಂಡು ಕುಡಿಯಬಹುದು.
ಕಿತ್ತಳೆ ಹಣ್ಣು: ಬೇಸಿಗೆಯಲ್ಲಿ ಕಿತ್ತಳೆ ಹಣ್ಣಿನ ಸೇವನೆಯನ್ನು ಹೆಚ್ಚಿಸಿ. ಏಕೆಂದರೆ ಅದರಲ್ಲಿ ನೀರಿನ ಪ್ರಮಾಣವು ತುಂಬಾ ಹೆಚ್ಚಿರುತ್ತದೆ, ಇದು ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ.
ಎಳನೀರು: ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಸೆಖೆ ತಡೆಯಲಾಗದೇ ತಂಪು ಪಾನೀಯಗಳನ್ನು ಸೇವಿಸಬೇಡಿ. ಅವುಗಳ ಬದಲು ಎಳನೀರನ್ನು ಕುಡಿಯಿರಿ. ಇದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುವುದಲ್ಲದೆ, ಹೀಟ್ ಸ್ಟ್ರೋಕ್ ಅಪಾಯವೂ ಕಡಿಮೆಯಾಗುತ್ತದೆ.