ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದ ಖಾಜಿ ಕೊಪ್ಪಲು ಪ್ರದೇಶದಲ್ಲಿ ಇಂದು ಮುಂಜಾನೆ ಕರಡಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅದನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಖಾಜಿ ಕೊಪ್ಪಲು ಪ್ರದೇಶದಲ್ಲಿ ಕರಡಿಯನ್ನು ಬಡಾವಣೆ ನಿವಾಸಿಗಳು ನೋಡಿದ್ದು, ಬಳಿಕ ಅದು ಕೊಪ್ಪಲು ಮಂಜಣ್ಣ ಅವರ ಮನೆ ಹಿಂಭಾಗದ ತೋಟದಲ್ಲಿರುವ ಮೆಕ್ಕೆಜೋಳ ಬೆಳೆಯಲ್ಲಿ ಅಡಗಿ ಕುಳಿತಿದೆ ಎಂದು ಹೇಳಲಾಗಿದೆ.
ಹೀಗಾಗಿ ಸ್ಥಳಕ್ಕೆ ಧಾವಿಸಿರುವ ಅರಣ್ಯಾಧಿಕಾರಿಗಳು ಅದರ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕರಡಿಯನ್ನು ಗುರುತಿಸುವ ಸಲುವಾಗಿ ಡ್ರೋಣ್ ಕ್ಯಾಮರಾವನ್ನು ಸಹ ಬಳಸುತ್ತಿದ್ದು, ಕರಡಿ ತಪ್ಪಿಸಿಕೊಳ್ಳದಂತೆ ಜಮೀನಿನ ಸುತ್ತಲೂ ಆಯ್ದ ಸ್ಥಳಗಳಲ್ಲಿ ಬಲೆ ಕಟ್ಟಲಾಗಿದೆ.