ಮೂಗುತಿ, ನತ್ತು, ಬೊಟ್ಟು, ಮೂಗಿನ ಆಭರಣ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಆಭರಣವನ್ನು ಇಷ್ಟಪಡದವರಾದರೂ ಯಾರು? ಸಾಂಪ್ರದಾಯಿಕ ಅಲಂಕಾರ ಶೈಲಿಯಲ್ಲಿ ಪ್ರಮುಖ ಆದ್ಯತೆ ಪಡೆದಿರುವ ಮೂಗುತಿಗೆ ಮಹತ್ತರವಾದ ಸ್ಥಾನವಿದೆ. ಕೆಲವು ಜನಾಂಗಗಳಲ್ಲಿ ಮೂಗು ಚುಚ್ಚಿಸಿಕೊಳ್ಳುವುದು ಕಡ್ಡಾಯವೂ ಹೌದು, ಸಂಪ್ರದಾಯವೂ ಹೌದು.
ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ, ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ, ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.
ಮೂಗುತಿಯಲ್ಲಿಯೂ ವಿವಿಧ ಪ್ರಕಾರದ ಮೂಗುತಿಗಳಿವೆ, ಇಂದು ಮೀನಿನ ಆಕಾರದ, ನಕ್ಷತ್ರದ ಆಕಾರದ, ಅರ್ಧ ಚಂದ್ರಾಕೃತಿಯ, ಸಣ್ಣ ಜುಮುಕಿಯನ್ನು ಹೋಲುವ ವಿನ್ಯಾಸದ ಮೂಗುತಿಗಳು ಮಾರುಕಟ್ಟೆಯಲ್ಲಿವೆ.
ಸರಳವಾಗಿ ಹಾಕುವ ರಿಂಗ್ ಕೂಡ ಮೂಗಿನೊಂದಿಗೆ ಮೊಗದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೂಗುತಿ ಎಂದರೆ ಮಾರು ದೂರ ಹೋಗುತ್ತಿದ್ದ ಕುಮಾರಿಯರೆಲ್ಲ ಅದರ ಬಲೆಗೆ ಬಿದ್ದದ್ದು ಆಗಿದೆ.
ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬರೂ ತಮ್ಮ ಆಚಾರ ವಿಚಾರ ಸಂಪ್ರದಾಯಕ್ಕೆ ಅನುಗುಣವಾಗಿ ಮೂಗುತಿ ಧರಿಸಿಕೊಳ್ಳುತ್ತಾರೆ. ಮೂಗುತಿ ಸಂಪ್ರದಾಯದಿಂದ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದೆ.