ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಈಗಾಗಲೇ ಹೊರ ಬಿದ್ದಿದ್ದು, 135 ಸ್ಥಾನ ಗಳಿಸಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ. ಆಡಳಿತ ಪಕ್ಷವಾಗಿದ್ದ ಬಿಜೆಪಿ ಕೇವಲ 66 ಸ್ಥಾನಗಳೊಂದಿಗೆ ಹೀನಾಯ ಸೋಲು ಅನುಭವಿಸಿದ್ದು, ಜೆಡಿಎಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಇದರ ಮಧ್ಯೆ ಫಲಿತಾಂಶದ ಬಳಿಕ ಕೋಮು ಸಾಮರಸ್ಯಕ್ಕೆ ಭಂಗ ತರುವಂತಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಈ ಕುರಿತಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸರು ಕೊಡಗು ಜಿಲ್ಲೆಯಲ್ಲಿ ಹದಿಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಇಂತಹ ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಕೊಡಗು ಜಿಲ್ಲಾ ರಕ್ಷಣಾಧಿಕಾರಿ ಕೆ. ರಾಮರಾಜನ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.