ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರು ಎಚ್ಚರಿಕೆ ವಹಿಸಬೇಕು.
ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ ಇದೆ.
ಕಾಡುಪ್ರಾಣಿಗಳು, ಹಾವು, ನವಿಲು, ಮೊಸಳೆ, ಚಿಟ್ಟೆ, ಆನೆ ಮೊದಲಾದವುಗಳನ್ನು ಕಣ್ತುಂಬಿಕೊಳ್ಳಬಹುದು. ಕಾಡಿನಲ್ಲಿ ವಿಹರಿಸುವ ಹುಲಿ, ಸಿಂಹಗಳನ್ನು ಸಮೀಪದಿಂದ ನೋಡಬಹುದಾಗಿದೆ. ಆದರೆ, ಪ್ರವಾಸಿಗರು ಸೂಚನೆಗಳನ್ನು ಪಾಲಿಸಿದರೆ ಒಳ್ಳೆಯದು. ಕೆಲವು ದಿನಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ವಾಹನದ ಮೇಲೆ ಸಿಂಹವೊಂದು ಎಗರಿತ್ತು.
ಶ್ರೀಗಂಧ, ಹೊನ್ನೆ, ಬೇವು, ಹುಣಸೆ ಸೇರಿದಂತೆ ನಾನಾ ರೀತಿಯ ಮರಗಳು ಇಲ್ಲಿದ್ದು, ದೊಡ್ಡ ರಾಗಿಹಳ್ಳಿ ಬೆಟ್ಟ, ಚಿಕ್ಕರಾಗಿಹಳ್ಳಿ ಬೆಟ್ಟ ಮೊದಲಾದ ಬೆಟ್ಟಗಳನ್ನು ಕಾಣಬಹುದು.
ಮೃಗಾಲಯದಲ್ಲಿರುವ ಚಿಕ್ಕ ವಸ್ತು ಸಂಗ್ರಹಾಲಯದಲ್ಲಿ ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ವೀಕ್ಷಿಸಬಹುದು. ಈ ಪ್ರದೇಶದಲ್ಲಿ ಬಿದಿರು ಹೆಚ್ಚಿದ್ದು, ಆನೆಗಳು ಕೂಡ ಹೆಚ್ಚಾಗಿ ಓಡಾಡುತ್ತವೆ. ತಮಿಳುನಾಡಿನಿಂದಲೂ ಆನೆಗಳ ಹಿಂಡು ಬರುವುದುಂಟು.
ಚಿಟ್ಟೆ ಪಾರ್ಕ್ ನಲ್ಲಿ ಬಗೆಬಗೆಯ ಚಿಟ್ಟೆಗಳನ್ನು ನೋಡಬಹುದಾಗಿದೆ. ಬನ್ನೇರುಘಟ್ಟ ಒಂದು ದಿನದ ಪ್ರವಾಸಕ್ಕೆ ಅನುಕೂಲವಾದ ಸ್ಥಳ. ಮೊದಲೇ ಮಾಹಿತಿ ಪಡೆದುಕೊಂಡು ಹೋಗಬಹುದಾಗಿದೆ.