ಪ್ರವಾಸಕ್ಕೆ ಹೋಗಬೇಕು ಅಂದರೆ ಒಂದೋ ಐತಿಹಾಸಿಕ ಸ್ಥಳಕ್ಕೆ ತೆರಳಬೇಕು. ಇಲ್ಲವಾದಲ್ಲಿ ನಿಸರ್ಗದ ಮಡಿಲಿನಲ್ಲಿ ಕಳೆದು ಹೋಗಬೇಕು. ಆದರೆ ಇವೆರಡೂ ಇರುವ ಯಾವುದಾದರೊಂದು ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಬಯಸಿದ್ದರೆ ಕೊಡಗು ಜಿಲ್ಲೆಯ ಮಡಿಕೇರಿ ನಿಮ್ಮ ಆಯ್ಕೆಯಾಗಿರಲಿ.
ಮಡಿಕೇರಿಗೆ ನೀವು ಒಮ್ಮೆ ಭೇಟಿ ನೀಡಿದ್ರಿ ಅಂದರೆ ಸಾಕು ಸಾಲು ಸಾಲು ಪ್ರವಾಸಿ ತಾಣಗಳು ನಿಮ್ಮನ್ನ ಕೈಬೀಸಿ ಕರೆಯುತ್ತವೆ. ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲಿ ಈ ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೇ ಒಂದು ಪರಮಾನಂದ.
ಲಿಂಗರಾಜ ಮಹರಾಜರ ರಾಜಧಾನಿಯಾಗಿದ್ದರಿಂದ ಈ ಊಡಿಗೆ ಮುದ್ದುರಾಜನ ಕೇರಿ ಎಂದು ಕರೆಯಲಾಗುತ್ತಿತ್ತು. ಕಾಲ ಕ್ರಮೇಣ ಬಾಯಿಂದ ಬಾಯಿಗೆ ಬಂದು ಈ ಊರು ಇದೀಗ ಮಡಿಕೇರಿ ಎಂದು ಹೆಸರು ಪಡೆದುಕೊಂಡಿದೆ.
ಇಲ್ಲಿ ರಾಜಾಸೀಟ್ನಲ್ಲಿ ಸೂರ್ಯಾಸ್ತವನ್ನ ನೋಡೋದೇ ಒಂದು ಮಜಾ. ಇದು ಮಾತ್ರವಲ್ಲದೇ ಎರಡನೇ ಲಿಂಗರಾಜನ ಕಾಲದ ಓಂಕಾರೇಶ್ವರ ದೇಗುಲಕ್ಕೆ ಈಗಲೂ ಸಾಕಷ್ಟು ಭಕ್ತಾದಿಗಳು ಆಗಮಿಸ್ತಾರೆ.
ಪ್ರಕೃತಿ ಮಡಿಲು ಮಡಿಕೇರಿ ಅಂದ್ಮೇಲೆ ಜಲಪಾತವಿಲ್ಲದೇ ಹೋದರೆ ಹೇಗೆ ಅಲ್ಲವೇ..? ಇಲ್ಲಿನ ಅಬ್ಬಿ ಜಲಪಾತ ಪ್ರವಾಸಿಗರ ಫೇವರಿಟ್ ಸ್ಪಾಟ್. ಮಂಜಿನಲ್ಲಿ ಆವೃತವಾದ ಈ ಅಬ್ಬಿ ಜಲಪಾತ ಪ್ರವಾಸಿಗರನ್ನ ಹೊಸ ಲೋಕಕ್ಕೇ ಕರೆದುಕೊಂಡು ಹೋಗುತ್ತದೆ. ಕಾಲೂರು ಎಂಬ ಗ್ರಾಮದಲ್ಲಿರುವ ಮಂದಲ್ ಪಟ್ಟಿ ಅಥವಾ ಮುಗಿಲು ಪೇಟೆ ಕೂಡ ಕಣ್ಣಿಗೆ ಹಬ್ಬ ನೀಡುವಂತಹ ಸ್ಥಳ.
ಅದೇ ರೀತಿ ಜೀವನದಿ ಕಾವೇರಿ ಕೂಡ ಇದೇ ಸ್ಥಳದಲ್ಲಿ ಜನಿಸಿದ್ದಾಳೆ. ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾಗಿದೆ.