ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನಿಷೇಧಿತ ಸಂಘಟನೆಯ ಸದಸ್ಯತ್ವ ಹೊಂದಿದ ವ್ಯಕ್ತಿಯೂ ಕಾನೂನಿನ ಪ್ರಕಾರ ಅಪರಾಧಿ ಎಂದು ಹೇಳಿದೆ.
ಅಂತಹ ವ್ಯಕ್ತಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿ ವಿಚಾರಣೆಗೆ ಒಳಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಹೀಗಾಗಿ ಕೇಂದ್ರ ಹಾಗೂ ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಮನ್ನಣೆ ಸಿಕ್ಕಂತಾಗಿದೆ.
ಪ್ರಕರಣದ ವಿವರ: 2011ರಲ್ಲಿ ಸುಪ್ರೀಂ ಕೋರ್ಟ್ ದ್ವಿ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪನ್ನು ಪರಿಷ್ಕರಿಸುವಂತೆ ಕೋರಿ ಕೇಂದ್ರ ಹಾಗೂ ಅಸ್ಸಾಂ ಸರ್ಕಾರ ಅರ್ಜಿ ಸಲ್ಲಿಸಿದ್ದವು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್. ಶಾ, ಸಿ.ಟಿ. ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ ನ್ಯಾಯಾಲಯದ ಅಂದಿನ ಆದೇಶ ಕಾನೂನಿಗೆ ತಕ್ಕದಾಗಿರಲಿಲ್ಲ ಎಂದು ಅಭಿಪ್ರಾಯಪಡಲಾಗಿದೆ.