ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ಅತಿಯಾದ ನಿದ್ದೆ ಆರೋಗ್ಯಕ್ಕೆ ಹಾನಿಕರ. ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅತಿಯಾಗಿ ನಿದ್ದೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಹೃದಯ ಸಮಸ್ಯೆ- ಕಡಿಮೆ ನಿದ್ರೆ ಮಾಡುವುದರಿಂದ ವ್ಯಕ್ತಿಗೆ ಅನೇಕ ಕಾಯಿಲೆಗಳು ಬರಬಹುದು. ಅದೇ ರೀತಿ ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಅಷ್ಟೇ ಅಲ್ಲ ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡಿದರೆ ಪಾರ್ಶ್ವವಾಯು ಸಮಸ್ಯೆ ಕಾಡಬಹುದು.
ಖಿನ್ನತೆ- ಅತಿಯಾದ ನಿದ್ರೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಹೆಚ್ಚು ನಿದ್ರೆ ಮಾಡುವುದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಇದು ನಿಮ್ಮ ಮೂಡ್ ಮೇಲೆ ಪರಿಣಾಮ ಬೀರುತ್ತದೆ.
ಬೊಜ್ಜಿನ ಸಮಸ್ಯೆ– ನಿದ್ರೆ ಮತ್ತು ಬೊಜ್ಜಿನ ನಡುವೆ ನೇರ ಸಂಬಂಧವಿದೆ. ಅತಿಯಾದ ನಿದ್ದೆ ಬೊಜ್ಜಿನ ಸಮಸ್ಯೆಗೆ ಕಾರಣವಾಗಬಹುದು. ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವುದರಿಂದ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳು ಬರುತ್ತವೆ.
ಮಧುಮೇಹದ ಅಪಾಯ – ಅತಿಯಾಗಿ ನಿದ್ರಿಸುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಒಳ್ಳೆಯದಲ್ಲ. ಏಕೆಂದರೆ ನೀವು ಹೆಚ್ಚು ನಿದ್ರೆ ಮಾಡಿದಾಗ ಅದು ಸಕ್ಕರೆಯನ್ನು ಸಂಸ್ಕರಿಸುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಮಧುಮೇಹದ ಅಪಾಯವಿರುತ್ತದೆ.