ಜಯಾ ಕಿಶೋರಿ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಬಾಹ್ಯ ಸೌಂದರ್ಯದಂತೆ ಆಕೆ ನಿರ್ಮಲ ಮನಸ್ಸಿನ ಒಡತಿ. ಲಕ್ಷಾಂತರ ಜನರು ಜಯಾ ಕಿಶೋರಿಯ ಸರಳತೆ ಮತ್ತು ಸೌಂದರ್ಯ ನೋಡಿ ಬೆರಗಾಗಿದ್ದಾರೆ. ಆಕೆಯ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಜಯಾ ಕಿಶೋರಿ ಅಪ್ರತಿಮ ಚೆಲುವೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಆಕೆಯ ಮುಖದ ತೇಜಸ್ಸು ನೋಡ್ತಿದ್ರೆ ಎಂಥವರು ಕೂಡ ಕಳೆದು ಹೋಗ್ತಾರೆ.
ಆದರೆ ಜಯಾ ಕಿಶೋರಿ ಆಧ್ಯಾತ್ಮದತ್ತ ವಿಪರೀತ ಒಲವು ಹೊಂದಿದ್ದಾರೆ. ಜಯಾ ಕಿಶೋರಿ ಬಹುಮುಖ ಪ್ರತಿಭೆ. ಈಕೆ ಪ್ರಸಿದ್ಧ ಕಥಾ ವಾಚಕಿ, ಪ್ರೇರಕ ಭಾಷಣಕಾರ್ತಿ ಮತ್ತು ಭಜನ್ ಗಾಯಕಿಯೂ ಹೌದು. ಆಕೆ ಆಗಾಗ ಶ್ರೀ ಕೃಷ್ಣನ ಭಕ್ತಿಯಲ್ಲಿ ಮುಳುಗಿರುತ್ತಾರೆ. ಈ ಕಾರಣದಿಂದಲೇ ಆಧುನಿಕ ಮೀರಾಬಾಯಿ ಎಂದೂ ಪ್ರಸಿದ್ಧರಾಗಿದ್ದಾರೆ. ಜಯಾ ಕಿಶೋರಿಯ ನಿಜವಾದ ಹೆಸರು ಜಯಾ ಶರ್ಮಾ. 1995ರ ಜುಲೈ 13ರಂದು ಈಕೆ ರಾಜಸ್ಥಾನದ ಸುಜನ್ಗಢ್ ಎಂಬ ಹಳ್ಳಿಯಲ್ಲಿ ಜನಿಸಿದರು.
ಜಯಾ ಕಿಶೋರಿಯವರ ತಾಯಿ ಗೀತಾದೇವಿ ಹರಿತ್ಪಾಲ್, ತಂದೆ ಶಿವಶಂಕರ ಶರ್ಮಾ. ಬಿಕಾಂ ವ್ಯಾಸಂಗ ಮಾಡಿರುವ ಜಯಾ ಕಿಶೋರಿ ಆಧ್ಯಾತ್ಮದತ್ತ ವಾಲಿದರು. 6-7 ವರ್ಷ ವಯಸ್ಸಿನಲ್ಲೇ ಅವರ ಆಧ್ಯಾತ್ಮದ ಪಯಣ ಪ್ರಾರಂಭವಾಯಿತು. ಅವರಿಗೆ 2016 ರಲ್ಲಿ ಆದರ್ಶ ಯುವ ಆಧ್ಯಾತ್ಮಿಕ ಗುರು ಪ್ರಶಸ್ತಿಯನ್ನು ನೀಡಲಾಗಿದೆ. 2019 ರಲ್ಲಿ ನಡೆದ ಫೇಮ್ ಇಂಡಿಯಾ ಏಷ್ಯಾ ಪೋಸ್ಟ್ ಸಮೀಕ್ಷೆಯಲ್ಲಿ ಅವರನ್ನು ಯೂತ್ ಐಕಾನ್ ಎಂದು ಕರೆಯಲಾಯಿತು.
2021 ರಲ್ಲಿ ವರ್ಷದ ಪ್ರೇರಕ ಸ್ಪೀಕರ್ ಪ್ರಶಸ್ತಿಯನ್ನು ಸಹ ಪಡೆದರು. 27ರ ಹರೆಯದ ಜಯಾ ಕಿಶೋರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. Instagram ನಲ್ಲಿ 5.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಜನರು ಅವರ ಮಾತುಗಳಿಗೆ ಮಂತ್ರಮುಗ್ಧರಾಗಿದ್ದಾರೆ, ಸರಳತೆ ಮತ್ತು ಅಂದಕ್ಕೆ ಮಾರು ಹೋಗಿದ್ದಾರೆ.