ಆಕರ್ಷಕ ಸವಲತ್ತು, ಉದ್ಯೋಗ ಭದ್ರತೆ ಜೊತೆಗೆ ಒಳ್ಳೆ ಸಂಬಳವಿರೋ ಕೆಲಸದ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಪರಿಪೂರ್ಣ ಉದ್ಯೋಗದ ನಿರೀಕ್ಷೆಯಲ್ಲಿರ್ತಾರೆ. ಅಂಥದ್ರಲ್ಲಿ ಪ್ರಯಾಣದ ರಜೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಆಯ್ಕೆ ಜೊತೆಗೆ ತಿಂಗಳಿಗೆ 4 ಲಕ್ಷ ರೂಪಾಯಿಗಳ ಆರಂಭಿಕ ವೇತನ ಇದ್ರೆ ಅಂಥ ಉದ್ಯೋಗವನ್ನು ಯಾರಾದರೂ ನಿರಾಕರಿಸ್ತಾರಾ? ಇದು ನಿಜಕ್ಕೂ ಎಲ್ಲರ ಕನಸಿನ ಉದ್ಯೋಗ.
ಈ ಆಫರ್ ಈಗಲೂ ಅಸ್ತಿತ್ವದಲ್ಲಿದೆ ಆದರೆ ಯಾರೊಬ್ಬರೂ ಇದನ್ನು ಸ್ವೀಕರಿಸಿ ಕೆಲಸಕ್ಕೆ ಸೇರುತ್ತಿಲ್ಲ. ಅಚ್ಚರಿಯಾದರೂ ಇದು ಸತ್ಯ. ಸ್ಕಾಟ್ಲೆಂಡ್‌ನ ಅಬರ್ಡೀನ್ ಕರಾವಳಿಯ ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್ ಉದ್ಯೋಗಕ್ಕಾಗಿ ಇಂಥದ್ದೊಂದು ಆಫರ್ ನೀಡಲಾಗಿದೆ. ಕಡಲಾಚೆಯ ರಿಗ್ ಎಂಬುದು ನೀರಿನಲ್ಲಿ ಅಥವಾ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆಯಲು, ಸಂಸ್ಕರಿಸಲು, ಅದನ್ನು ಭೂಮಿಗೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸಲಾಗುವ ಒಂದು ದೊಡ್ಡ ರಚನೆ.
ಈ ಹುದ್ದೆಗೆ ನೇಮಕಗೊಂಡವರನ್ನು ಒಂದೇ ಬಾರಿಗೆ ಒಂದರಿಂದ ಆರು ತಿಂಗಳ ಅವಧಿಗೆ ಆಫ್‌ಶೋರ್ ರಿಗ್‌ಗೆ ಕಳುಹಿಸಲಾಗುವುದು. ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು, ದಿನಕ್ಕೆ 36,000 ರೂಪಾಯಿ ಮೂಲ ವೇತನ ನೀಡಲಾಗುತ್ತದೆ. ಎಂಡಿಇ ಕನ್ಸಲ್ಟೆಂಟ್ಸ್ ಸಂಸ್ಥೆ ಈ ಆಫರ್ ಕೊಟ್ಟಿದೆ. ಆದರೆ ಉದ್ಯೋಗಿ 2 ವರ್ಷಗಳ ಕಾಲ ಅಲ್ಲೇ ಇರಬೇಕು. ತಲಾ 6-6 ತಿಂಗಳ 2 ಶಿಫ್ಟ್‌ಗಳನ್ನು ಪೂರ್ಣಗೊಳಿಸಿದರೆ ನಂತರ ಸಂಬಳ 95,420 ಡಾಲರ್ ಅಂದ್ರೆ ಸುಮಾರು 1 ಕೋಟಿ ರೂಪಾಯಿವರೆಗೆ ಹೆಚ್ಚಳವಾಗಲಿದೆ.
ಈ ಉದ್ಯೋಗದಾತರ ಹೆಸರು ಬಹಿರಂಗವಾಗಿಲ್ಲ, ಆದರೆ ಇದೊಂದು ದೊಡ್ಡ ಕಂಪನಿ ಅಂತಾನೇ ಹೇಳಲಾಗ್ತಿದೆ. ಈ ಕೆಲಸವನ್ನು ಒಪ್ಪಿ ಸೇರಿಕೊಂಡರೆ ಅಂಥವರಿಗೆ ರಜಾದಿನದ ವೇತನವು ದಿನಕ್ಕೆ 3,877 ರೂಪಾಯಿ ಇರುತ್ತದೆ. ಒಂದು ವಾರದವರೆಗೆ ಅನಾರೋಗ್ಯದ ರಜೆ ಕೂಡ ಸಿಗಲಿದೆ. ಈ ಆಫರ್ ಕೇಳಿದ ತಕ್ಷಣ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡಲು ರೆಡಯಾಗಿಬಿಡಬೇಡಿ. ಯಾಕಂದ್ರೆ ಈ ಉದ್ಯೋಗವು ಎಲ್ಲರಿಗೂ ಅಲ್ಲ.
ನೀವು ತಾಂತ್ರಿಕ ಮತ್ತು ಸುರಕ್ಷತಾ ತರಬೇತಿ BOSIET (ಬೇಸಿಕ್ ಆಫ್‌ಶೋರ್ ಸೇಫ್ಟಿ ಇಂಡಕ್ಷನ್ ಮತ್ತು ಎಮರ್ಜೆನ್ಸಿ ಟ್ರೈನಿಂಗ್), FOET (ಮುಂದೆ ಕಡಲಾಚೆಯ ತುರ್ತು ತರಬೇತಿ), CA-EBS (ಸಂಕುಚಿತ ವಾಯು ತುರ್ತು ಉಸಿರಾಟದ ವ್ಯವಸ್ಥೆ) ಮತ್ತು OGUK ವೈದ್ಯಕೀಯ ತರಬೇತಿಯನ್ನು ಒಳಗೊಂಡಿರಬೇಕು. ಈ ಅರ್ಹತೆಯಿದ್ದರೆ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು.