ದಪ್ಪ ಇರುವವರು ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದರೆ, ತೆಳ್ಳಗೆ ಇರುವವರು ದಪ್ಪಗಾಗುವ ಬಗ್ಗೆ ಚಿಂತಿಸುತ್ತಾರೆ. ಹಾಗಂತ ಜಂಕ್ ಫುಡ್ ಗಳನ್ನು ತಿಂದರೆ ಬೊಜ್ಜು ಹೆಚ್ಚಾಗುತ್ತದೆ. ಸರಳವಾಗಿ ದೇಹದ ತೂಕ ಹೆಚ್ಚಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ಶಕ್ತಿಯೂ ಬರುತ್ತದೆ. ದೇಹದ ತೂಕ ಹೆಚ್ಚಿಸಿಕೊಳ್ಳಲು ಸರಳವಾದ ಸಲಹೆಗಳಿವೆ, ಅವು ಇಂತಿವೆ:
ಪ್ರತಿದಿನ ಒಂದು ಲೋಟದಷ್ಟು ಕೆನೆಭರಿತ ಹಾಲು ಕುಡಿಯಬೇಕು. ಇದರಲ್ಲಿ ಕ್ಯಾಲರಿಗಳು ಹೇರಳವಾಗಿದ್ದು, ವಿಟಮಿನ್ ಎ ಮತ್ತು ವಿಟಮಿನ್ ಡಿ ಗಳನ್ನೂ ಕೂಡ ಹೊಂದಿದೆ. ಜತೆಗೆ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಬೇಕು. ಬಾಳೆಹಣ್ಣಿನಲ್ಲಿ ಕ್ಯಾಲೋರಿಸ್ ಮತ್ತು ಕಾರ್ಬೋಹೈಡ್ರೇಟ್ಸ್ ಸಮೃದ್ಧವಾಗಿದೆ ತೂಕ ಹೆಚ್ಚಿಸಲು ಇದು ಸಹಕಾರಿ. ಜತೆಗೆ ಸ್ವಲ್ಪ ಶೇಂಗಾ ಬೀಜ ಕೂಡ ತಿನ್ನಬೇಕು. ಇವುಗಳ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಮೊಟ್ಟೆ ಸೇವನೆಯಿಂದ ಕೂಡ ತೂಕ ಹೆಚ್ಚಲು ಸಹಕಾರಿಯಾಗುತ್ತದೆ. ಪ್ರತಿದಿನ ಬೇಯಿಸಿದ ಒಂದು ಮೊಟ್ಟೆ ಸೇವಿಸಬೇಕು. ಇದರಲ್ಲಿ 70 ಕ್ಯಾಲರಿಗಳು ಹಾಗೂ 5 ಗ್ರಾಂ ಗಳಿಗಾಗುವಷ್ಟು ಕೊಬ್ಬನ್ನು ಹೊಂದಿದೆ. ಮೊಟ್ಟೆಯ ಹಳದಿ ಭಾಗವು ಅತಿ ಹೆಚ್ಚು ಕೊಲೆಸ್ಟ್ರಾಲ್ ಹೊಂದಿರುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಉಪಯುಕ್ತವಾಗಿದೆ.
ಬೆಳಗ್ಗೆ ಖಾಲಿ ಹೊಟ್ಟೆಗೆ ಮೊಳಕೆ ಬರಿಸಿದ ಹೆಸರುಕಾಳು ತಿಂದರೂ ಕೂಡ ತೂಕ ಹೆಚ್ಚಿಸಿಕೊಳ್ಳಲು ಪ್ರಯೋಜನಕಾರಿ. ಇನ್ನು ಆಹಾರದಲ್ಲಿ ಹೆಚ್ಚು ಮೊಸರು, ಕಬ್ಬಿನ ಹಾಲು, ಅಕ್ಕಿ, ಕಡಲೇ ಕಾಳು, ಗೋಧಿಯನ್ನು ಹೆಚ್ಚಾಗಿ ಸೇವಿಸಬೇಕು. ಜತೆಗೆ ದಿನನಿತ್ಯ ಡ್ರೈ ಫ್ರೂಟ್ಸ್ ಸೇವನೆ ಮಾಡುವುದು ಕೂಡ ಉತ್ತಮ. ಇದರಲ್ಲಿ ಕ್ಯಾಲರಿಗಳು, ಪೋಷಕಾಂಶಗಳು ಮತ್ತು ನಾರಿನ ಅಂಶ ಸಮೃದ್ಧವಾಗಿದೆ. ಇದರಿಂದ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಳವಾಗಲು ನೆರವಾಗುತ್ತದೆ.