ತುಳಸಿ ಔಷಧೀಯ ಮತ್ತು ಪೂಜನೀಯ ಗುಣ ಹೊಂದಿರುವ ಅಪರೂಪದ ಸಸ್ಯ. ಇದು ಆರೋಗ್ಯಕ್ಕೆ, ಸೌಂದರ್ಯ ವೃದ್ಧಿಗೆ ಮಾತ್ರವಲ್ಲ, ಕೇಶರಾಶಿ ಬೆಳವಣಿಗೆಗೂ ಬಹುಪಕಾರಿ.
ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಗುಣಪಡಿಸುವುದು ಸುಲಭದ ಕೆಲಸವಲ್ಲ. ತುಳಸಿ ಎಲೆಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
15 – 20 ತುಳಸಿ ದಳಗಳಿಗೆ ತುಸುವೇ ನೀರು ಹಾಕಿ ರುಬ್ಬಿ, ಈ ಪೇಸ್ಟ್ ಅನ್ನು ನೆತ್ತಿಯ ಭಾಗ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ. 30 ನಿಮಿಷ ಬಳಿಕ ತಣ್ಣೀರಿನಿಂದ ತಲೆ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
ಕೂದಲು ಒಣಗುವ ಸಮಸ್ಯೆಯೂ ಬಹುಜನರನ್ನು ಕಾಡುತ್ತದೆ. ಕೂದಲು ಸ್ಪ್ಲಿಟ್ ಆಗುವುದು, ಬಣ್ಣ ಬದಲಾಗುವುದು ಮತ್ತಿತರ ಸಮಸ್ಯೆ ನಿವಾರಣೆಗೆ ತುಳಸಿ ಎಲೆಯಲ್ಲಿ ಮದ್ದಿದೆ. ತುಳಸಿ ಎಲೆಯನ್ನು ರುಬ್ಬಿ ರಸವನ್ನು ಸೋಸಿಡಿ. ಇದನ್ನು ನೆತ್ತಿಯ ಭಾಗಕ್ಕೆ ಮತ್ತು ಕೂದಲಿನ ಬುಡಕ್ಕೆ ಹಾಕಿ. ಹದಿನೈದು ನಿಮಿಷ ಮಸಾಜ್ ಮಾಡಿ.
ರಾತ್ರಿ ಹಾಕಿ ಮುಂಜಾನೆ ಸ್ನಾನ ಮಾಡುವುದು ಒಳ್ಳೆಯದು. ಲೈಟ್ ಶಾಂಪೂ ಬಳಸಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮೃದುವಾಗುತ್ತದೆ ಮತ್ತು ಆರೋಗ್ಯ ಪಡೆಯುತ್ತದೆ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ.