ಕರ್ನಾಟಕ ಮೂಲದ ಶ್ರೀಮಂತರೊಬ್ಬರು ತಮ್ಮ ಸಂಪತ್ತಿನ ಶೇಕಡ 50 ರಷ್ಟು ಭಾಗವನ್ನು ದಾನ ಮಾಡಲು ಮುಂದಾಗಿದ್ದು, ಈ ಮೂಲಕ ಅತಿ ಹೆಚ್ಚು ದಾನ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಝೆರೋದಾ ಕಂಪನಿ ಸಂಸ್ಥಾಪಕ 35 ವರ್ಷದ ನಿಖಿಲ್ ಕಾಮತ್ ‘ದಿ ಗಿವಿಂಗ್ ಫ್ಲೆಡ್ಜ್’ ಮೂಲಕ ತಮ್ಮ ಸಂಪತ್ತನ್ನು ಧಾರೆ ಎರೆಯಲು ಮುಂದಾಗಿದ್ದು, ಅವರು 25,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಒಡೆಯರಾಗಿದ್ದಾರೆ.
ತಮ್ಮ ಸಹೋದರ ನಿತಿನ್ ಜೊತೆ 2010ರಲ್ಲಿ ಬೆಂಗಳೂರಿನಲ್ಲಿ ಝೆರೋದಾ ಕಂಪನಿಯನ್ನು ನಿಖಿಲ್ ಸ್ಥಾಪಿಸಿದ್ದು, ಸ್ಟಾಕ್ ಬ್ರೋಕರೇಜ್ ವ್ಯವಹಾರ ನಡೆಸುವ ಈ ಕಂಪನಿ ಈಗ ಭಾರತದ ನಂಬರ್ 1 ಸ್ಥಾನದಲ್ಲಿದೆ. ಇಂದಿನ ದಿನಮಾನಗಳಲ್ಲಿ ಹಣ ಗಳಿಕೆಯೇ ಪ್ರಾಧಾನ್ಯವಾಗಿರುವಾಗ ತಮ್ಮ 35ನೇ ವಯಸ್ಸಿನಲ್ಲೇ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವ ನಿಖಿಲ್ ಕಾಮತ್ ಅವರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.