ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲು ದಿನಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳ ನಾಯಕರು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಮತದಾರರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಇದರ ಮಧ್ಯೆ ಮತದಾರರನ್ನು ಸೆಳೆಯಲು ಕುಕ್ಕರ್, ಸೀರೆ, ದಿನಸಿ ಹಂಚಿಕೆಯನ್ನೂ ಕೆಲ ಆಕಾಂಕ್ಷಿಗಳು ಮಾಡುತ್ತಿದ್ದಾರೆ. ಅದರಲ್ಲೂ ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ಭರ್ಜರಿ ಗಿಫ್ಟ್ ನೀಡಲು ಕೆಲ ಅಭ್ಯರ್ಥಿಗಳು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಬಾಡೂಟದ ರಾಜಕೀಯ, ಮತದಾರರಿಗೆ ತೀರ್ಥಕ್ಷೇತ್ರಗಳ ಪ್ರವಾಸ ಮೊದಲಾದವನ್ನು ಆಯೋಜಿಸಲಾಗುತ್ತಿದೆ. ಅದರಲ್ಲೂ ಬಾಡೂಟಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿರುವುದರಿಂದ ಅಭ್ಯರ್ಥಿಗಳು ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇದಕ್ಕೆ ಮಾರಿ ಹಬ್ಬ, ಊರ ಹಬ್ಬಗಳು ವೇದಿಕೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಬಾಡೂಟ ಹಾಕಿಸಲಾಗುತ್ತಿದೆ.
ಅಲ್ಲದೆ ಮಹಿಳಾ ಮತದಾರರನ್ನು ಸೆಳೆಯಲು ಕುಟುಂಬ ಜೊತೆ ತೀರ್ಥಕ್ಷೇತ್ರಗಳ ಪ್ರವಾಸವನ್ನು ಏರ್ಪಡಿಸಲಾಗುತ್ತಿದ್ದು, ವಿಧಾನಸಭಾ ಚುನಾವಣಾ ಆಕಾಂಕ್ಷಿಗಳು ಬಸ್ ಮಾಡಿಕೊಡುವುದರ ಜೊತೆಗೆ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡುತ್ತಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಬಾಡೂಟದ ರಾಜಕೀಯ ಮತ್ತಷ್ಟು ಹೆಚ್ಚಲಿದೆ.