ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಏಕೆಂದರೆ ಅತಿಯಾದ ಚಳಿ, ಸೂರ್ಯನ ಶಾಖ, ಮಾಲಿನ್ಯ ಮತ್ತು ಬಿಸಿ ಗಾಳಿಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ವಿಶೇಷವಾಗಿ ತುಟಿಗಳು ಈ ಋತುವಿನಲ್ಲಿ ಹೆಚ್ಚು ಒಣಗುತ್ತವೆ ಮತ್ತು ಬಿರುಕು ಬಿಡುತ್ತವೆ.
ಒಣ ತುಟಿಗಳಿಗೆ ಹವಾಮಾನದ ಶುಷ್ಕತೆ ಕಾರಣ. ಇದರ ಜೊತೆಗೆ ಕೆಲವೊಂದು ಅಭ್ಯಾಸಗಳಿಂದಾಗಿ ತುಟಿಗಳಿಗೆ ಇನ್ನಷ್ಟು ಹಾನಿಯಾಗುತ್ತದೆ.
ಒಡೆದ ಮತ್ತು ಒಣಗಿದ ತುಟಿಗಳು ಮುಖದ ಒಟ್ಟಾರೆ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಚಳಿಗಾಲದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ತುಟಿಗಳು ಒಡೆದಿದ್ರೆ ಬಹಿರಂಗವಾಗಿ ನಗಲು ಕೂಡ ನಾವು ಹಿಂದೇಟು ಹಾಕುತ್ತೇವೆ. ಕೆಲವೊಮ್ಮೆ ತುಟಿ ಒಡೆದು ರಕ್ತ ಬರಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣ ಮತ್ತು ಪರಿಹಾರಗಳೇನು ಅನ್ನೋದನ್ನು ನೋಡೋಣ.
ಕಡಿಮೆ ನೀರು ಕುಡಿಯುವವರ ತುಟಿಗಳು ಹೆಚ್ಚು ಬಿರುಕು ಬಿಡುತ್ತವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗುವುದಿಲ್ಲ, ಹಾಗಾಗಿ ನಾವು ನೀರು ಕಡಿಮೆ ಕುಡಿಯುತ್ತೇವೆ. ಇದರಿಂದಾಗಿ ಡಿಹೈಡ್ರೇಶನ್ ಉಂಟಾಗುತ್ತದೆ. ಚೆನ್ನಾಗಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಂಡರೆ ತುಟಿಗಳು ಕೂಡ ಬಿರುಕು ಬಿಡುವುದಿಲ್ಲ.
ಹೆಚ್ಚು ಡಾರ್ಕ್ ಲಿಪ್‌ಸ್ಟಿಕ್ ಬಳಸಿದ್ರೆ ತುಟಿಗಳು ಹೆಚ್ಚು ಬಿರುಕು ಬಿಡುತ್ತವೆ. ಕಳಪೆ ಗುಣಮಟ್ಟದ ಲಿಪ್ ಬಾಮ್ ಬಳಕೆ ಕೂಡ ತುಟಿಗಳಿಗೆ ಅಪಾಯಕಾರಿ. ಆದ್ದರಿಂದ ತುಟಿಗಳಿಗೆ ನೈಸರ್ಗಿಕ ಎಣ್ಣೆಯನ್ನು ಹಚ್ಚಿಕೊಳ್ಳಿ, ಇದು ತುಟಿಗಳಿಗೆ ಆಂತರಿಕ ಪೋಷಣೆಯನ್ನು ನೀಡುತ್ತದೆ.
ಚಳಿಗಾಲದಲ್ಲಿ ತುಟಿಗಳು ಒಣಗಲು ಪ್ರಾರಂಭಿಸಿದಾಗ, ಕೆಲವರು ಅದನ್ನು ನಾಲಿಗೆಯಿಂದ ನೆಕ್ಕುತ್ತಾರೆ. ಈ ರೀತಿ ಮಾಡುವುದು ತುಟಿಗಳಿಗೆ ಹಾನಿಕಾರಕ. ಏಕೆಂದರೆ ಲಾಲಾರಸದಲ್ಲಿ ತುಟಿಗಳನ್ನು ಒಣಗಿಸುವ ಕೆಲವು ಕಿಣ್ವಗಳಿವೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರ ಸೇವಿಸದೇ ಇದ್ದರೆ ಅಂಥವರ ಚರ್ಮವು ಹೆಚ್ಚು ಶುಷ್ಕವಾಗಿರುತ್ತದೆ. ಇದೇ ಕಾರಣಕ್ಕೆ ತುಟಿಗಳು ಕೂಡ ಒಣಗಿ ಒಡೆಯಲಾರಂಭಿಸುತ್ತವೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಹೆಚ್ಚು ತಾಜಾ ಹಣ್ಣು ಮತ್ತು ತರಕಾರಿಯನ್ನು ಸೇವನೆ ಮಾಡಬೇಕು. ಜ್ಯೂಸ್ ಕೂಡ ಕುಡಿಯುವುದರಿಂದ ದೇಹಕ್ಕೆ ಆಂತರಿಕ ಪೋಷಣೆ ಸಿಗುತ್ತದೆ ಮತ್ತು ತುಟಿಗಳು ಬಿರುಕು ಬಿಡುವುದಿಲ್ಲ.