ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಇಂದು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದು, ಮಹತ್ವಾಕಾಂಕ್ಷಿ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ.
GSLV-3 ರಾಕೆಟ್ ಗಳನ್ನು ಹೊತ್ತ ಚಂದ್ರಯಾನ -3 ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಅಲ್ಲದೇ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗಿದೆ. ಆಗಸ್ಟ್ 23ರಂದು ಚಂದ್ರಯಾನ ನೌಕೆ ಚಂದ್ರನ ಮೇಲ್ಮೈ ಸ್ಪರ್ಶಿಸುವ ನಿರೀಕ್ಷೆ ಇದೆ.
GSLV ಮಾರ್ಕ್-3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ -3 ಎಂದು ಮರುನಾಮಕರಣ ಮಾಡಲಾಗಿದೆ. ಜಿ ಎಸ್ ಎಲ್ ವಿ 43.5 ಮೀಟರ್ ಎತ್ತರವಿದೆ. ಚಂದ್ರಯಾನ-3 ಮೂಲಕ ಇಸ್ರೋ ಮೃದುವಾಗಿ ಉಪಗ್ರಹವನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಯತ್ನಿಸಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಹಾಗೂ ಪ್ರೊಪಲ್ಶನ್ ಮಾಡ್ಯೂಲರ್ ಗಳನ್ನು ಒಳಗೊಂಡಿದೆ. ಇದು ಸುಮಾರು 3900 ಕೆಜಿ ತೂಕವಿದೆ.
ವಿಕ್ರಮ ಸುರಕ್ಷಿತವಾಗಿ ಮೃದುವಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡುವಂತೆ ಮಾಡಲಾಗಿದೆ. ಲ್ಯಾಂಡರ್ ನ ಎಲ್ಲಾ 4 ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್ ಗಳಿವೆ. ಇದರಿಂದ ಹೇಗೆ ಬೇಕೋ ಹಾಗೇ ಲ್ಯಾಂಡ್ ಮಾಡಲು ಅನುಕೂಲವಾಗಲಿದೆ. ಇವುಗಳನ್ನು ಲ್ಯಾಂಡರ್ ಪ್ರೊಪಲ್ಶನ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಇದರ ಸಹಾಯದಿಂದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತದೆ. ಲ್ಯಾಂಡರ್ ಬಳಿಕ ರೋವರ್ ಪ್ರಗ್ಯಾನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಚಂದ್ರನ ಮೇಲ್ಮೈ ಮೇಲೆ ಸಂಚರಿಸಿ ವೈಜ್ಞಾನಿಕ ಪ್ರಯೋಗಗಳನ್ನು, ಚಂದ್ರನ ಮಣ್ಣನ್ನು ವಿಶ್ಲೇಷಿಸುತ್ತದೆ ಹಾಗೂ ಚಂದ್ರನ ಮೇಲ್ಮೈ ಸುತ್ತಲು ತಿರುಗಿ ಚಂದ್ರನ ಕಂಪನವನ್ನು ದಾಖಲಿಸಲಿದೆ.
ಎರಡನೇಯ ಅಂಶವೆಂದರೆ ಚಂದ್ರನ ಮೇಲ್ಮೈ ಉಷ್ಣಾಂಶದ ಬಗ್ಗೆ ಅಧ್ಯಯನ ನಡೆಯಲಿದೆ. ಮೂರನೆಯದು ಪ್ಲಾಸ್ಮಾ ವಾತಾವರಣದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ನಾಲ್ಕನೆಯದು ಭೂಮಿ ಹಾಗೂ ಚಂದ್ರನ ಅಂತರವನ್ನು ನಿಖರವಾಗಿ ಅಳೆಯಲಿದೆ. ಚಂದ್ರಯಾನ -3 ನೌಕೆ ಸುಮಾರು 615 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.