ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಸಂಚಾರ, ಗೃಹಿಣಿಯರಿಗೆ 2000 ರೂ. ನೆರವು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೇರಿದಂತೆ ಕೆಲ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಗಳ ಜಾರಿಗೆ ಸಿದ್ಧತೆ ನಡೆದಿದೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಇದೀಗ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆದಿದ್ದು, ಇದರ ಮಧ್ಯೆ ಗೃಹಲಕ್ಷ್ಮಿ ಯೋಜನೆ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಅಡಿ ಒಂದು ಮನೆಯಲ್ಲಿ 2,000 ರೂ. ಗಳನ್ನು ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಕುರಿತು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಮನೆಯಲ್ಲಿ ಹಿರಿಯರಾದ ಅತ್ತೆಗೇ ಪ್ರಾಧಾನ್ಯ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತಿಗೆ ಧ್ವನಿಗೂಡಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಗೃಹಲಕ್ಷ್ಮಿ ಯೋಜನೆ ಅಡಿ ಅತ್ತೆಗೆ ಮಹತ್ವ ನೀಡಬೇಕಾಗುತ್ತದೆ. ಆದರೆ ಸ್ವತಃ ಅತ್ತೆಯೇ ಮುಂದೆ ಬಂದು ಸೊಸೆಗೆ ನೆರವು ನೀಡಲು ಬಯಸಿದರೆ ಆ ಸಂದರ್ಭದಲ್ಲಿ ಸೊಸೆಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.